ಕುಂದಾಪುರ ಭಾಷಿಕರ ಒಗ್ಗಟ್ಟು ಮೆಚ್ಚುವಂತದ್ದು : ಎಂ.ಕೆ.ವಿಜಯ ಕುಮಾರ್

ಕಾರ್ಕಳ: ಕುಂದಾಪುರ ಭಾಷಿಕರ ಪ್ರಾಮಾಣಿಕತೆ, ಬದ್ಧತೆ, ಭಾಷಾ ಪ್ರೇಮ ಮೆಚ್ಚುವಂತದ್ದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕೀಲ ಎಂ.ಕೆ.ವಿಜಯ ಕುಮಾರ್ ಹೇಳಿದರು.
ಇಲ್ಲಿನ ಅನಂತಶಯದ ಪ್ರಕಾಶ್ ಹೋಟೆಲ್‌ನ ಸಂಭ್ರಮ ಸಭಾಂಗಣದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯಲ್ಲಿ ಅಯೋಜಿಸಿದ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕುಂದಾಪುರ ಭಾಷಾ ನೆಲದ ‘ಕುಂದಾಪುರ ಕನ್ನಡದ ಮೇಲಿನ ಪ್ರೀತಿ, ಅಭಿಮಾನಗಳನ್ನು ತಾವು ಹೋದ ಕಡೆಗಳಲ್ಲೆಲ್ಲ ಬಿತ್ತರಿಸಿ, ತಮ್ಮ ಒಗ್ಗಟ್ಟನ್ನು, ಒಳ್ಳೆತನವನ್ನು ಸಾಬೀತು ಪಡಿಸುತ್ತಿದ್ದಾರೆ. ನಿಜಕ್ಕೂ ಇದು ಇತರರಿಗೂ ಮಾದರಿಯಾದುದು ಎಂದರು.
ನಿವೃತ್ತ ಪ್ರಾಂಶುಪಾಲ ಸಿದ್ದಾಪುರ ವಾಸುದೆವ್ ಭಟ್ ಕುಂದಾಪುರ ಕನ್ನಡ ಭಾಷೆ ತನ್ನದೇ ಆದ ವೈಶಿಷ್ಟ್ಯವನ್ನು ಒಳಗೊಂಡಿದ್ದು. ಹಳೆಗನ್ನಡ ಭಾಷೆಯ ಕಾವ್ಯ ಗುಣವನ್ನು ಹೊಂದಿದೆ. ಸಾಹಿತ್ಯದ ಎಲ್ಲ ಪ್ರಕಾರಗಳೂ ಈ ಭಾಷೆಯಲ್ಲಿವೆ. ಈ ಭಾಷೆಯಲ್ಲಿ ಕೃತಿ ರಚನೆಗೆ ಅವಕಾಶ, ಅಧ್ಯಯನದ ಅಗತ್ಯವಿದೆ ಎಂದರು.
ಕುಂದಾಪುರದ ಕಿರಿಯ ವಕೀಲ ಶಾನ್ಕಟ್ ಉಮೇಶ್ ಶೆಟ್ಟಿ ಮಾತನಾಡಿ ಕುಂದಾಪುರ ಭಾಷೆ ಬೆಳೆದು ಬರಲು ಕುಂದಾಪುರ ಪ್ರದೇಶದ ಜನರು ನಡೆಸಿಕೊಂಡು ಬಂದ ಹಬ್ಬ ಹರಿದಿನಗಳು, ಆರಾಧನೆ, ನಂಬಿಕೆಗಳೇ ಪ್ರಬಲ ಕಾರಣ. ಆದರೆ ಇಂದು ಯಾಂತ್ರಿಕತೆ, ಔದ್ಯೋಕಿಕತೆಯ ಕಾರಣ ಅವು ಮೂಲೆಗುಂಪಾಗುತ್ತಿದ್ದರೂ, ಭಾಷೆಯ ಸೊಗಡನ್ನು ಉಳಿಸಿಕೊಳ್ಳಬೇಕು ಎಂಬ ಹಂಬಲದಿಂದ ವಿಶ್ವ ಕುಂದಾಪುರ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ ಎಂದರು.
ಸಂಚಾಲಕ ಎಸ್.ನಿತ್ಯಾನಂದ್ ಪೈ ಮಾತನಾಡಿ ಕುಂದಾಪುರ ಭಾಷೆಗೆ ಎಲ್ಲರನ್ನೂ ಸೆಳೆಯುವ ಶಕ್ತಿಯದೆ. ಹೀಗಾಗಿ ಇಂತಹ ಕಾರ್ಯಕ್ರಮ ಆಯೊಜಿಸಲು ಪ್ರೇರಣೆ ದೊರಕಿತು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕೀರ್ತನ್ ಕುಮಾರ್ ಮಾತನಾಡಿ ಅವರು ಮಾತನಾಡಿ ಕುಂದಾಪುರ ಕನ್ನಡ ಭಾಷಾ ಪ್ರೇಮದ ವೈಶಿಷ್ಟ್ಯ ತಿಳಿಸಿದರು. ಗಣೇಶ್ ಗಂಗೊಳ್ಳಿ ಕುಂದಾಪುರ ಭಾಷೆಯ ಹಾಡುಗಳನ್ನು ಹಾಡಿ ಗಮನ ಸೆಳೆದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶಟ್ಟಿ ಕೊಂಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ರಾಜಾರಾಮ್ ಶೆಟ್ಟಿ ನಿರೂಪಿಸಿದರು. ಪ್ರಕಾಶ ನಾಯ್ಕ್ ವಂದಿಸಿದರು.







