ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಖಂಡನೀಯ: ಡಿ.ಆರ್ ರಾಜು

ಡಿ.ಆರ್ ರಾಜು
ಕಾರ್ಕಳ: ಬಿಜೆಪಿ ಯುವ ನೇತಾರ ನೆಟ್ಟಾರು ಪ್ರವೀಣ್ ಕೊಲೆ ಖಂಡನೀಯ. ಈ ಕೊಲೆಯ ಹಿಂದಿರುವ ಕಾಣದ ಕೈಗಳ ದುಷ್ಟ ಪ್ರವೃತ್ತಿಗೆ ಸರಕಾರ ಕಾನೂನಿನ ನೆಲೆಯಲ್ಲಿ ಸೂಕ್ತ ಕ್ರಮಕೈಗೊಳ್ಳುವ ಜೊತೆಗೆ ಕಠಿಣ ಶಿಕ್ಷೆ ನೀಡುವ ಅನಿವಾರ್ಯತೆಯನ್ನು ಸರಕಾರ ಮನಗಾಣಬೇಕೆಂದು ಕಾರ್ಕಳ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಡಿ ಆರ್ ರಾಜು ಆಗ್ರಹಿಸಿದರು.
ನೆಟ್ಟಾರು ಪ್ರವೀಣ್ ಪೂಜಾರಿ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಅವರು ಗೆಜ್ಜೆ ಗಿರಿ ಕೋಟಿ ಚೆನ್ನಯ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದ್ದು ಜನಾನುರಾಗಿದ್ದರು. ಸಂಘಟನೆಯ ಹೆಸರಿನಲ್ಲಿ ಅಮಾಯಕ ಯುವಕರನ್ನು ಮನಸ್ಸಿನಲ್ಲಿ ಜಾತಿ ಧರ್ಮದ ದ್ವೇಷದ ಕಿಚ್ಚನ್ನು ಹೊತ್ತಿಸಿ ಅದರಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಲು ಹೊರಟಿರುವ ತಮ್ಮ ವಿಕ್ರತ ಮನಸ್ಸಿಗೆ ಯುವ ಜನತೆಯನ್ನು ಬಲಿಕೊಟ್ಟು ಅವರ ಬಡ ಕುಟುಂಬವನ್ನು ಬೀದಿಪಾಲು ಮಾಡುವ ತಾವು ಯಾವತ್ತೂ ಅವರ ಕುಟುಂಬದ ಕಣ್ಣೀರ ಶಾಪದಿಂದ ಮುಕ್ತರಾಗುತ್ತೀರಿ ಎಂದು ಭಾವಿಸಿದ್ದರೆ ಅದು ತಮ್ಮ ಮೂರ್ಖತನ ಎಂದು ಹೇಳಿಕೆ ನೀಡಿದ ಅವರು ಜಾತಿ ಧರ್ಮದ ಬಗ್ಗೆ ಕಂದಕ ತೋಡುವುದನ್ನು ಬಿಟ್ಟು ಸೌಹಾರ್ದ ಸಮಾಜವನ್ನು ನಿರ್ಮಾಣ ಮಾಡುವತ್ತ ಗಮನ ಹರಿಸಿ ಎಂದು ಅವರು ಕರೆ ನೀಡಿದರು.
ತಮ್ಮ ರಾಜಕೀಯದ ದುರಾಸೆಗೆ ಯುವ ಜನಾಂಗವನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಟ್ಟು ಅವರ ಸುಂದರ, ಸುಮಧುರ, ಸಂತುಷ್ಟ ಜೀವನಕ್ಕೆ ದಾರಿಯಾಗುವ ಉನ್ನತ ಶಿಕ್ಷಣ, ಉದ್ಯೋಗ ಕೊಡಿಸುವಲ್ಲಿ ಪ್ರಯತ್ನಿಸುವುದು ತಮ್ಮ ಜೀವನದ ಉದ್ದೇಶವಾಗಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





