‘ಶ್ರೀ ರಾಮಾಯಣ ದರ್ಶನಂ’ ಕುರಿತು ಹೊಸಹಳ್ಳಿ ನೋಟ
ಈ ಹೊತ್ತಿನ ಹೊತ್ತಿಗೆ

ಶ್ರೀ ಕುವೆಂಪು ಅವರ ‘‘ಶ್ರೀ ರಾಮಾಯಣ ದರ್ಶನಂ’’ ಮಹಾ ಕಾವ್ಯವನ್ನು ಕುರಿತು ಈಗಾಗಲೇ ಸಾವಿರಾರು ಲೇಖನಗಳು, ನೂರಾರು ಗ್ರಂಥಗಳು ಒಂದೆರಡಾದರೂ ಉದ್ಗ್ರಂಥಗಳು ಪ್ರಕಟವಾಗಿವೆ. ಇಷ್ಟಾದರೂ ಇಪ್ಪತ್ತನೆಯ ಶತಮಾನದ ಈ ಮಹಾಕೃತಿಯನ್ನು ಕುರಿತು ಹೊಸ ಹೊಸ ಬಗೆಯ ಓದು ಮತ್ತು ವ್ಯಾಖ್ಯಾನಗಳು ಇಲ್ಲಿಗೆ ಮುಗಿಯಿತು ಎನ್ನುವಂತೇನೂ ಇಲ್ಲ.
ಇತ್ತೀಚೆಗೆ ಡಾ. ರಾಜೇಗೌಡ ಹೊಸಹಳ್ಳಿ ಅವರು ‘ರಾಮಾಯಣ ದರ್ಶನಂನಲ್ಲಿ ಆಧುನಿಕ ತತ್ವಾದರ್ಶ ದರ್ಶನ’ ಎಂಬ ಫಲವತ್ತಾದ ಸುದೀರ್ಘ ಲೇಖನವೊಂದನ್ನು ಬರೆದು ಪ್ರಕಟಿಸಿರುವುದೇ ಇದಕ್ಕೆ ಸಾಕ್ಷಿ. ಕುವೆಂಪು ಪರ ಮತ್ತು ವಿರೋಧದ ದನಿಗಳಿಂದ ಕೂಡಿರುವ ಎಲ್ಲರೂ ಓದಲೇ ಬೇಕಾಗಿರುವ ಈ ಚಿಂತನಶೀಲ ಲೇಖನ ಎಷ್ಟು ಫಲವತ್ತಾಗಿದೆ ಎಂದರೆ ಆಧುನಿಕ ವಿಶ್ವ ಎದುರಿಸುತ್ತಿರುವ ಎಲ್ಲ ಬಗೆಯ ಪಿಡುಗಿಗೆ ಪರಿಹಾರ ರೂಪವಾದ ದಾರಿ ದೀಪದಂತಿದೆ.
ಈ ಕೆಳಗಿನ ಕೆಲವು ಪ್ರತಿಮಾ ಸ್ವರೂಪದ ಹೇಳಿಕೆಗಳನ್ನು ಗಮನಿಸಿ:
ಅವರ ಮಹಾ ಕಾವ್ಯವೊಂದು ಕಡಲು. ಅದು ಎಷ್ಟು ತಡಕಾಡಿದರೂ ಏನಾದರೂ ಸಿಗುತ್ತಲೇ ಹೋಗುವ ಒಂದು ಮಹಾನಿಧಿ. (ಪುಟ. 2)
ಕತೆ ಸಾಗಲು ಒಬ್ಬ ರಾಜ ಬೇಕು, ರಾಜಧಾನಿ ಬೇಕು, ಸಮರ ಮಾಡಲು ಎದುರಾಳಿ ಬೇಕು, ಅಲ್ಲಿ ಗೆಲುವು ಸಾಮ್ರಾಜ್ಯ ವಿಸ್ತರಿಸುವ ಮಹಾ ಸಾಹಸವಾಗಬೇಕೆನ್ನುವ ಕಥಾ ಪರಂಪರೆ ಗಳು ಜಗತ್ತಿನಾದ್ಯಂತ ಇದ್ದವುಗಳೇ ಹೌದು. ಹಾಗಾಗಿ ಇಲ್ಲಿಯೂ ಶ್ರೀರಾಮನಿದ್ದಾನೆ, ಅಯೋಧ್ಯೆ ಇದೆ, ದಶರಥ, ಜನಕ, ಮಿಥಿಲೆ, ಸೀತೆ ಇತ್ಯಾದಿ ಪಾತ್ರಗಳಿವೆ. ಇವೆಲ್ಲವನ್ನೂ ಅವರವರ ಭಾವಕ್ಕೆ ಅವರವರ ಭಕುತಿಗೆ ಅನುಗುಣವಾಗಿ ಜನಪದ ಕವಿಗಳಿಂದ ಹಿಡಿದು ವಾಲ್ಮೀಕಿವರೆಗೆ ಕಥಾ ಹಂದರ ಸೃಷ್ಟಿಯಾಗಿದೆ. ಮುಂದೆ ಜಗತ್ತಿನಾದ್ಯಂತ ಈ ಕಥೆ ಜನಪ್ರಿಯ ವಾಗಿ ಸೀತೆಗೆ ರಾಮನಿಗೆ ಹೊಂದಿಸುತ್ತಾ ಸಾಗಿದೆ.
ಈ ಸಾಗರೋಪಾದಿಯ ಹರಿವು ಕುವೆಂಪು ಅವರು ಕಥೆ ಹೇಳುತ್ತ ಕಡೆಗೊಂದು ದರ್ಶನಕ್ಕೇರಿಸಲು ಸಹಕರಿಸಿದೆ. (ಪು.4)ಅವರ ನಿಸರ್ಗ ಪ್ರೀತಿ ಮಹಾಕಾವ್ಯದಲ್ಲಿ ಉಕ್ಕುವ ತೊರೆ ಯಂತಿದೆ. ಅದರೊಳಗೆ ವೈಚಾರಿಕ ನಿಲುವು ಹಾಗೂ ಅಧ್ಯಾತ್ಮ ಘನೀಕರಿಸಿಕೊಂಡಿದೆ. (ಪುಟ. 7)
ಈ ಭಾಗವು 1942 ರ ‘‘ಮಾಡು ಇಲ್ಲವೇ ಮಡಿ’’ ಎಂಬ ಗಾಂಧೀಜಿ ಕರೆಗೆ ಸಂವಾದಿಯಂತಿದೆ. ಅಂದು ಅದು; ಗಾಂಧೀಜಿ ಭಾರತವನ್ನು ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ತನ್ನ ಹಾಜರಿರದಿದ್ದರೂ ಪ್ರಜೆಗಳೇ ನಿರ್ವಹಿಸುವ ಆಂದೋಲನ. ಗಾಂಧೀಜಿ ಜೈಲೊಳಗಿದ್ದರೂ ಸ್ವರಾಜ್ಯದ ಕೂಗು ದಂಗೆ ಎದ್ದಂತೆ ಧ್ವನಿಗೂಡಿಸುತ್ತಿತ್ತು. ಅದು ಭಾರತ ಮಾತೆಯನ್ನು ಬಿಡುಗಡೆಗೊಳಿಸುವ ಕೂಗು. ಇಲ್ಲಿ ಕಪಿಧ್ವಜವು ಸೀತಾದೇವಿಯ ಸೆರೆ ಹುಡುಕಲು, ಬಿಡಿಸಲು ತಕಥೈ ಕುಣಿದು ಕುಪ್ಪಳಿಸುತ್ತಿರುವ ಕೂಗು. ಅಂದು ಶಾಲಾ ಕಾಲೇಜುಗಳ ಹಾಜರಾತಿಯೇ ದೇಶ ದ್ರೋಹ ಎಂಬಂಥ ಸನ್ನಿವೇಶ. ಇಲ್ಲಿ ಕಿಷ್ಕಿಂಧೆಯಲ್ಲಿ ಮನೆಮಠ, ಹೆಂಡತಿ, ಮಕ್ಕಳನ್ನು ಬಿಟ್ಟು ಗೆಳೆತನದ ದೊರೆಗೆ ಸರ್ವಸ್ವವನ್ನು ಅರ್ಪಿ ಸುವ ಪ್ರಜೆಗಳ ಕೂಗು. ‘ಕಷ್ಟಮಿಷ್ಟಂ ಸುಖಮೆ ಸಂಕಟ’ ಎಂಬ ಕಾವ್ಯನುಡಿ ಸರ್ವೋದಯ ಸಮನ್ವಯ ದೃಷ್ಟಿಗೆ ಎರಕ ಹೊಯ್ದಂತಿದೆ. ನಮ್ಮ ಗೀಗಿ ಜನಪದ ಕವಿಗಳು ಹಾಡುವಂತೆ ‘‘ಹೇಳ್ಯಾರ ನಮ ಗಾಂಧಿ ಸರದಾರ ನೀವ ನಿಮಗಿನ್ನ ನಾಯಕರು ಹೋರಾಡಬೇಕು ಬಿಟ್ಟು ಮನೆ ಮಠ’’ ಇದು ಗಾಂಧೀಜಿ ಎಂಬ ಮಹಾತ್ಮನ ಪ್ರಭಾವ. (ಪುಟ. 50)
ಶ್ರೀ ರಾಮಾಯಣ ದರ್ಶನದಲ್ಲಿಯ ಆಧುನಿಕ ತತ್ವಾದರ್ಶನ ವನ್ನ ನೆಪ ಮಾಡಿಕೊಂಡು ಸಮಗ್ರ ವಿಶ್ವ ವ್ಯಾಪಿ ದರ್ಶನಾ ದರ್ಶನ ಗಳನ್ನು ಸಂಗ್ರಹಿಸಿ ನಮ್ಮ ಮುಂದಿಡುತ್ತಿರುವ ಒಂದು ಸಂಕೀರ್ಣ ಲೇಖನವಿದು. ಇಂತಹ ಲೇಖನವನ್ನು ಬರೆಯುವುದಕ್ಕ ಒಂದು ತರಬೇತಿ ಬೇಕಾಗುತ್ತದೆ. ಆ ತರಬೇತಿ ರಾಜೇಗೌಡರಿಗೆ ಹುಟ್ಟರಿವಿನಂತಿದೆ. ಇವರ ಸಮಗ್ರ ಬರವಣಿಗೆಯ ಸ್ವರೂಪ ಕೂಡ ಇದು. ಅದಕ್ಕೆ ಹೊಂದಿಕೊಂಡಂತೆ ತಮ್ಮದೇ ಆದ ಒಂದು ಭಾಷಾ ಶೈಲಿಯನ್ನು ಅವರು ಸಾಧಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆತುಸು ಸುತ್ತು ಬಳಸುವಂತೆ ಕಂಡರೂ ಜಾಡಿಗೆ ಬಿದ್ದವರಿಗೆ ಸರಾಗವಾಗಿ ಓದಿಸಿಕೊಳ್ಳುವುದರಲ್ಲಿ ಅನುಮಾನ ವಿಲ್ಲ.
ಈ ಮೇಲಿನ ಉದಾಹರಣೆಗಳನ್ನು ಸೂಕ್ಷ್ಮವಾಗಿ ನೋಡಿದರೆ ಇನ್ನೊಂದು ಮುಖ್ಯ ಸಂಗತಿ ಮನವರಿಕೆಯಾಗದಿರದು. ಅದೆಂದರೆ ರಾಜೇಗೌಡರ ಅದಮ್ಯ ಜೀವನ ಪ್ರೀತಿ. ಕುವೆಂಪು ಜತೆ ಜತೆಯಾಗಿ ಗಾಂಧೀಜಿ, ಪರಮಹಂಸ, ಮಹರ್ಷಿ ಅರವಿಂದ ಘೋಷ್ ಮತ್ತು ವಿವೇಕಾನಂದರಂತಹ ಮಹಾನ್ ಸಾಧಕ ಚಿಂತಕರನ್ನು ಕೂಡಿಸಿಕೊಂಡು ಪರ್ಯಾಲೋಚಿಸುತ್ತಿರುವ ಶ್ರೀಯುತರು ಸರ್ವಮಾನ್ಯ ಜೀವನ ಸಂವಿಧಾನವೊಂದರ ಹುಡುಕಾಟದಲ್ಲಿ ತೊಡಗಿರುವುದು ಕಾಣಿಸುತ್ತಿದೆ.
ನಾನು ಈ ಕೃತಿಯನ್ನು ಅಪೂರ್ವ ಎಂದು ಕರೆಯುತ್ತಿರುವುದಕ್ಕೆ ನನ್ನದೇ ಆದ ಕಾರಣವಿದೆ. ರಾಮಾಯಣ ದರ್ಶನವನ್ನು ಕುರಿತು ಇದಕ್ಕಿಂತ ಒಳ್ಳೆಯ ಲೇಖನಗಳಿಗೆ ಕೊರತೆಯಿಲ್ಲದಿರಬಹುದು. ಆದರೆ ರಾಜೇಗೌಡರು ಮೂಲ ಕೃತಿಯನ್ನು ಗ್ರಹಿಸುತ್ತಿರುವ ರೀತಿ ಮತ್ತು ತಮ್ಮ ಗ್ರಹಿಕೆಯನ್ನು ಜಗತ್ತಿನ ವ್ಯಾಪ್ತಿಯಲ್ಲಿ ಮಂಡಿಸುತ್ತಿರುವ ಬಗೆ ತೀರಾ ಸಾಮಾನ್ಯವಾದುದಲ್ಲ. ಈ ಪುಸ್ತಕ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.







