ಸರಕಾರ ಮೊದಲು ಸಮಾನವಾಗಿ ಪರಿಹಾರ ಘೋಷಣೆ ಮಾಡಲಿ: ಬಿ.ಕೆ. ಇಮ್ತಿಯಾಝ್

ಶಾಂತಿ ಸಭೆ
ಸುರತ್ಕಲ್, ಜು.30: ಸರಕಾರ ಪಕ್ಷಪಾತಿಯಾಗಿದ್ದುಕೊಂಡು ನಡೆಸುವ ಈ ಶಾಂತಿ ಸಭೆ ಯಾರ ಗಂಜಿ ಬೇಯಿಸಲು ಎಂದು ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದ್ದಾರೆ.
ಮುಸ್ಲಿಂ ಜಮಾಅತ್ ಪ್ರತಿನಿಧಿಗಳನ್ನು ಕರೆದು ಶಾಂತಿ ಪಾಠ ಹೇಳುವ ಅಗತ್ಯ ಇಲ್ಲ. ಪ್ರಕ್ಷುಬ್ದ ಸನ್ನಿವೇಶದಲ್ಲಿ ಹೇಗೆ ಶಾಂತಿ ಕಾಪಾಡಬೇಕೆಂದು ನಿನ್ನೆ ಫಾಝಿಲ್ ನ ಮೃತ ದೇಹ ದಫನ ಮಾಡಿದ ಮಂಗಳಪೇಟೆಯ ಜಮಾಅತ್ ನವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮಾಧ್ಯಮಗಳನ್ನು ದೂರ ಇಟ್ಟು ನಡೆಸುವುದು ಶಾಂತಿ ಸಭೆಯೋ ಅಥವಾ ವಾರ್ನಿಂಗ್ ಸಭೆಯೋ ಎಂದು ಪ್ರಶ್ನಿಸಿರುವ ಅವರು, ಜನರು ಮೂರ್ಖರಲ್ಲ. ಸರಕಾರ ಮೊದಲು ಸಮಾನವಾಗಿ ಪರಿಹಾರ ಘೋಷಣೆ ಮಾಡಲಿ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ದ.ಕ.ಜಿಲ್ಲಾಡಳಿತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಶಾಂತಿ ಸಭೆಯನ್ನು ಆಯೋಜಿಸಿದೆ.
Next Story