ಕೊಲೆ ರಾಜಕಾರಣ ತಿರಸ್ಕರಿಸಿ, ಸೌಹಾರ್ದತೆ ಎತ್ತಿ ಹಿಡಿಯಿರಿ : ಜನತೆಗೆ ಡಿವೈಎಫ್ಐ ಮನವಿ

ಮಂಗಳೂರು: ಬೆಳ್ಳಾರೆಯಲ್ಲಿ ಎರಡು ಕೊಲೆಗಳು ನಡೆದ ಬೆನ್ನಿಗೆ ಸುರತ್ಕಲ್ ನಲ್ಲಿ ಅಮಾಯಕ ಯುವಕ ಮುಹಮ್ಮದ್ ಫಾಝಿಲ್ ಕೊಲೆ ನಡೆದಿರುವುದು ನಾಡಿನ ಕೋಮು ಸೌಹಾರ್ದಕ್ಕೆ ದೊಡ್ಡ ಬೆದರಿಕೆ ಒಡ್ಡಿದೆ. ಇಂತಹ ಆತಂಕಕಾರಿ ಬೆಳವಣಿಗೆಗಳಿಗೆ ಬಿಜೆಪಿ ಸರಕಾರ ನೇರ ಹೊಣೆಯಾಗಿದೆ. ಜನಾಮಾನ್ಯರ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕೊಲೆ ರಾಜಕಾರಣವನ್ನು ಜನತೆ ಒಕ್ಕೊರಲಿನಿಂದ ತಿರಸ್ಕರಿಸಬೇಕು, ಮತ ಸೌಹಾರ್ದತೆಯನ್ನು ಎತ್ತಿ ಹಿಡಿಯಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಜನತೆಯಲ್ಲಿ ಮನವಿ ಮಾಡಿದೆ.
ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ತನ್ನ ಎಂದಿನ ಚಾಳಿಯಂತೆ ಸರಕಾರದ ಬೆಂಬಲದೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಮತೀಯ ಹಿಂಸೆಯನ್ನು ಪ್ರಚೋದಿಸುತ್ತಿದೆ. ಆ ಮೂಲಕ ಧರ್ಮಾಧಾರಿತ ಧ್ರುವೀಕರಣ ನಡೆಸುವುದು, ಸರಕಾರದ ವಿರುದ್ಧ ಎದ್ದಿರುವ ಜನಾಭಿಪ್ರಾಯದ ದಿಕ್ಕು ತಪ್ಪಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಈ ಕಾರಣದಿಂದಲೆ ಕರಾವಳಿಯಲ್ಲಿ ಸರಣಿ ಕೊಲೆಗಳು ನಡೆಯುತ್ತಿದೆ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ಕಾರ್ಯದರ್ಶಿ ಬಸವರಾಜ ಪೂಜಾರ್ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.