ದ.ಕ.ಜಿಲ್ಲೆಯಲ್ಲಿ ನಿರಂತರ ನಡೆಯುತ್ತಿರುವ ಕೊಲೆ ಕೃತ್ಯಗಳು ಖಂಡನಾರ್ಹ: ಜಮಾಅತೆ ಇಸ್ಲಾಮೀ ಹಿಂದ್

ಬೆಂಗಳೂರು : ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಯುವಕರ ಕೊಲೆ ಮತ್ತು ಹಿಂಸಾಚಾರಗಳು ತೀವ್ರ ಖಂಡನೀಯ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ.ಮುಹಮ್ಮದ್ ಸಾದ್ ತಿಳಿಸಿದ್ದಾರೆ.
ಸುಳ್ಯ ತಾಲೂಕಿನ ಬೆಳ್ಳಾರೆಯ ಮಸೂದ್, ಪ್ರವೀಣ ನಂತರ ಸುರತ್ಕಲ್ ನ ಪಾಝಿಲ್ ಎಂಬವರ ಕೊಲೆಯು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಹಾಗೂ ಕೋಮು ಉದ್ವಿಗ್ನತೆಯ ಪರಿಣಾಮವಾಗಿದೆ. ಈ ಘಟನೆಗಳು ಕೆಲವು ತೀವ್ರವಾದಿ ಕೋಮು ಸಂಘಟನೆಗಳಿಗೆ ತಮ್ಮ ದ್ವೇಷದ ಮಾರುಕಟ್ಟೆಯನ್ನು ಜೀವಂತವಾಗಿಡಲು ಮುಕ್ತ ಅವಕಾಶ ದೊರೆತಿದೆ. ಸರಕಾರ ಮತ್ತು ಆಡಳಿತ ವರ್ಗವು ಈ ಶಕ್ತಿಗಳನ್ನು ನಿಯಂತ್ರಿಸುವ ಬದಲು ಅನೇಕ ಸಂದರ್ಭಗಳಲ್ಲಿ ಮೌನ ಬೆಂಬಲ ಹಾಗೂ ಮುಕ್ತವಾಗಿ ಕಾರ್ಯಾಚರಿಸಲು ಅವಕಾಶ ನೀಡಿದೆ.
ಇಂತಹ ವಿಷಮ ಸಂದರ್ಭದಲ್ಲಿ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಕೊಲೆಗೀಡಾದ ಪ್ರವೀಣನ ಕುಟುಂಬವರ್ಗವನ್ನು ಭೇಟಿಯಾಗಿ ಪರಿಹಾರ ಘೋಷಣೆ ಮಾಡಿದ್ದಾರೆ. ಇದು ಸ್ವಾಗತಾರ್ಹ. ಆದರೆ, ಹತ್ತಿರದಲ್ಲೇ ವಾಸಿಸುತ್ತಿರುವ ಕೊಲೆಯಾದ ಮಸೂದ್ ಕುಟುಂಬ ಸದಸ್ಯರನ್ನು ಭೇಟಿಯಾಗದೇ ಇರುವುದು ಖೇದಕರ. ಅವರ ಈ ಪಕ್ಷಪಾತೀಯ ನಿಲುವು ಖಂಡನೀಯ. ಸರಕಾರವು ಎಲ್ಲಾ ಸಮುದಾಯಗಳನ್ನು ಸಮಾನ ದೃಷ್ಟಿಯಲ್ಲಿ ಕಾಣಬೇಕು ಎಂದು ನಾವು ಆಗ್ರಹಿಸುತ್ತೇವೆ. ಇತರ ಸಂತ್ರಸ್ತ ಕುಟುಂಬಕ್ಕೂ ಪರಿಹಾರ ನೀಡಬೇಕು. ಕಾನೂನು ಬಾಹಿರ ಕೃತ್ಯ ಹಾಗೂ ಅದರ ಹಿಂದಿರುವ ಶಕ್ತಿಗಳನ್ನು ಶೀಘ್ರವಾಗಿ ಬಂಧಿಸಿ ಶಾಂತಿ ಕಾಪಾಡಬೇಕು. ಅಪರಾಧಿಗಳ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕು. ಅಮಾಯಕರನ್ನು ಸತಾಯಿಸಬಾರದು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ನೀಡಬಾರದು. ತಮ್ಮ ತುಚ್ಛ ರಾಜಕೀಯ ಲಾಭಕ್ಕಾಗಿ ಶಾಂತಿ, ಸಾಮರಸ್ಯ ಹಾಗೂ ಜನತೆಯ ನೆಮ್ಮದಿಯನ್ನು ಹಾಳು ಮಾಡುವ ಮತ್ತು ಕೋಮು ಉದ್ವಿಗ್ನತೆ ಉಂಟುಮಾಡುವ ಶಕ್ತಿಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು ಹಾಗೂ ಎಚ್ಚರಿಕೆಯಿಂದ ಇರಬೇಕು ಎಂದು ಡಾ.ಮುಹಮ್ಮದ್ ಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







