ಕ್ರೈಸ್ತರ ಮೇಲಿನ ದಾಳಿ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಆಲಿಸುವುದಿಲ್ಲ ಎಂಬ ಆರೋಪ ಸುಳ್ಳು: ಆರ್ಚ್ ಬಿಷಪ್ ಪೀಟರ್ ಮಚಾದೋ

(ಡಾ.ಪೀಟರ್ ಮಚಾದೋ - ಆರ್ಚ್ ಬಿಷಪ್, ಬೆಂಗಳೂರು )
ಬೆಂಗಳೂರು, ಜು.30: 'ಮಾನವ ಹಕ್ಕುಗಳು ಅಥವಾ ಧಾರ್ಮಿಕ ಹಕ್ಕುಗಳ ಕುರಿತ ಪ್ರಕರಣಗಳು ಹಾಗೂ ಕ್ರೈಸ್ತರ ಮೇಲಿನ ದಾಳಿಗಳ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಆಲಿಸುವುದಿಲ್ಲ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ' ಎಂದು ಬೆಂಗಳೂರು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ತಿಳಿಸಿದ್ದಾರೆ.
'ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂಬುದನ್ನು ತಿಳಿಸಲು ಕ್ರೈಸ್ತ ಸಮುದಾಯವು ಈ ಸಂದರ್ಭದಲ್ಲಿ ಇಚ್ಛಿಸುತ್ತದೆ.ಮಾನವ ಹಕ್ಕುಗಳು ಅಥವಾ ಧಾರ್ಮಿಕ ಹಕ್ಕುಗಳ ಕುರಿತ ಪ್ರಕರಣಗಳನ್ನು ಆಲಿಸಲು ಘನತೆವೆತ್ತ ಸುಪ್ರೀಂಕೋರ್ಟ್ ಹಿಂಜರಿಯುತ್ತಿದೆ ಅಥವಾ ವಿಳಂಬವನ್ನು ಮಾಡುತ್ತಿದೆ ಎಂದು ನಾವು ಎಂದಿಗೂ ಕಲ್ಪಿಸಿಕೊಳ್ಳುವುದಿಲ್ಲ ಹಾಗೂ ಆ ಕುರಿತು ಅನುಮಾನವನ್ನು ಸಹ ವ್ಯಕ್ತಪಡಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಕ್ರೈಸ್ತರ ಮೇಲಿನ ದಾಳಿಗಳ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಆಲಿಸುವುದಿಲ್ಲ ಎಂಬಂತಹ ದಿನನಿತ್ಯ ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿಗಳನ್ನು ಕಂಡು ನನಗೆ ಅತೀವ ಬೇಸರವಾಗಿದೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದನ್ನು ನಾನು ತೀಕ್ಷ್ಣವಾಗಿಖಂಡಿಸುತ್ತೇನೆ. ಕೋವಿಡ್ ಸಾಂಕ್ರಾಮಿಕಕ್ಕೆ ತುತ್ತಾಗಿರುವ ನ್ಯಾಯಾಧೀಶರೊಬ್ಬರು ಸಹಜವಾಗಿಯೇ ಈ ಪ್ರಕರಣವನ್ನು ಆಲಿಸುವುದು ವಿಳಂಬವಾಗುತ್ತದೆ ಎಂಬುದು ಸಾಮಾನ್ಯಜ್ಞಾನವೇ ಹೊರತು, ಇದಕ್ಕಾಗಿ ಅವರ ಮೇಲೆ ಆರೋಪಗಳನ್ನು ಹೊರಿಸುವುದು ತಪ್ಪಾಗುತ್ತದೆ' ಎಂದೂ ತಿಳಿಸಿದ್ದಾರೆ.
'ಇದೇ ಸಂದರ್ಭದಲ್ಲಿ, ಈಗಲೂ ಸಹ ದೇಶದಲ್ಲಿ, ವಿಶೇಷವಾಗಿ ಮತಾಂತರ ನಿಷೇಧಕಾಯ್ದೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಕ್ರೈಸ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂಬುದನ್ನು ನಾವು ಪುನರುಚ್ಛರಿಸುತ್ತಿದ್ದೇವೆ. ಇಂತಹ ಅನೇಕ ಪ್ರಕರಣಗಳು ಸಾರ್ವಜನಿಕವಾಗಿ ವರದಿಯಾಗಿರುವುದಿಲ್ಲ. ಈ ವಿಷಯದಲ್ಲಿ ಭಾರತದ ಘನತೆವೆತ್ತ ಸರ್ವೋಚ್ಛ ನ್ಯಾಯಾಲಯವು ನಮಗೆ ನ್ಯಾಯವನ್ನು ನೀಡುತ್ತದೆ ಎಂಬುದನ್ನು ನಾನು ಧೃಡವಾಗಿ ನಂಬುತ್ತೇವೆ' ಎಂದು ಡಾ.ಪೀಟರ್ ಮಚಾದೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







