ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆ ಹಿನ್ನೆಲೆ; ಕೊಲೆಯಾದ ಮೂವರ ಮನೆಗೂ ಸಿಎಂ ಬೊಮ್ಮಾಯಿ ಭೇಟಿ ನೀಡಬೇಕಿತ್ತು
► ಶಾಂತಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ►ಹಿಂದುತ್ವ ಸಂಘಟನೆ- ಮುಸ್ಲಿಂ ಸಮುದಾಯದ ಪ್ರಮುಖರ ಗೈರು ► ಮುಂದಿನ ವಾರದಿಂದ ಸರಣಿ ಶಾಂತಿ ಸಭೆ: ದ.ಕ. ಜಿಲ್ಲಾಧಿಕಾರಿ

ಮಂಗಳೂರು: ಬೆಳ್ಳಾರೆಯಲ್ಲಿ ಇತ್ತೀಚೆಗೆ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಅದಕ್ಕಿಂದ ಕೆಲ ದಿನಗಳ ಹಿಂದೆ ಕೊಲೆಯಾದ ಮಸೂದ್ ಮಾತ್ರವಲ್ಲದೆ, ಸಿಎಂ ನಗರದಲ್ಲಿರುವಾಗಲೇ ಹತ್ಯೆಯಾದ ಫಾಝಿಲ್ ಮನೆಗೂ ಭೇಟಿ ನೀಡಿ ಸಾಂತ್ವಾನ ಹೇಳಬೇಕಾಗಿತ್ತು ಎಂಬ ಅಭಿಪ್ರಾಯ ಇಂದು ನಡೆದ ದ.ಕ. ಜಿಲ್ಲಾ ಶಾಂತಿ ಸಭೆಯಲ್ಲಿ ವ್ಯಕ್ತವಾಗಿದೆ.
ಕಳೆದ ಸುಮಾರು ಎರಡು ವಾರದಿಂಚೆಗೆ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ವಿವಿಧ ಧಾರ್ಮಿಕ ಮುಖಂಡರು ಹಾಗೂ ಸಂಘಟನೆಗಳ ಮುಖಂಡರ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಆಲಿಸುವ ಸಲುವಾಗಿ ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು.
ಕೊಲೆಗೀಡಾದ ಸಂತ್ರಸ್ತರ ಎಲ್ಲಾ ಕುಟುಂಬಕ್ಕೂ ಸಮಾನ ಪರಿಹಾರ ಒದಗಿಸಬೇಕು. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ವಹಿಸಬೇಕು. ಮಾಧ್ಯಮದಲ್ಲಿ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸಬೇಕು ಎಂಬ ಸಲಹೆಗಳ ಜತೆಯಲ್ಲೇ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಮುಸ್ಲಿಂ ಸಂಘಟನೆಗಳು ಹಾಗೂ ಸಮುದಾಯದ ನಾಯಕರು ಭಾಗವಹಿಸಿಲ್ಲದ ಕಾರಣ ಅವರೆಲ್ಲರನ್ನೂ ಸೇರಿಸಿ ಮತ್ತೊಂದು ಸಭೆ ನಡೆಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸಭೆಯ ಬಳಿಕ ಮಾಹಿತಿ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಯಾವುದೇ ಪ್ರಕರಣದಲ್ಲಿ ಸುಮ್ಮನೆ ಯಾರನ್ನು ವಶಕ್ಕೆ ಪಡೆದು ವಿಚಾರಿಸುವುದಾಗಲಿ ಅಥವಾ ಬಂಧಿಸುವುದಾಗಲಿ ಮಾಡುವುದಿಲ್ಲ. ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ ಎಂಬುದನ್ನು ಸಭೆಯಲ್ಲಿ ಹಲವರಿಂದ ವ್ಯಕ್ತವಾದ ಅನುಮಾನಗಳಿಗೆ ಸ್ಪಷ್ಟಪಡಿಸಲಾಗಿದೆ ಎಂದರು.
ಬೀಟ್ ಕಮಿಟಿ, ಮೊಹಲ್ಲಾ ಕಮಿಟಿ ಹಾಗೂ ಠಾಣಾ ಮಟ್ಟದಲ್ಲಿ ಶಾಂತಿ ಸಭೆಗಳನ್ನು ನಡೆಸಬೇಕು. ಹೀಗೆ ಮಾಡುವುದರಿಂದ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂಬ ಸಲಹೆ ವ್ಯಕ್ತವಾಗಿದೆ. ನಾವು ಈ ಬಗ್ಗೆ ಅಧಿಕಾರಿಗಳಿಗೆ ಸಭೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸೂಚನೆ ನೀಡಿದ್ದೇವೆ. ಸೂಕ್ಷ್ಮ ಪ್ರದೇಶಗಳಲ್ಲಿ ಇಂತಹ ಸಭೆಗಳನ್ನು ನಡೆಸುವ ಭರವಸೆಯನ್ನೂ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದವರಿಗೆ ನೀಡಲಾಗಿದೆ. ಗಾಂಜಾ ಮತ್ತು ಮದ್ಯ ಸೇವನೆ ಮಾಡಿಕೊಂಡು ಇಂತಹ ಪ್ರಕರಣಗಳು ನಡೆಯುತ್ತಿದೆ ಎಂಬ ಬಗ್ಗೆಯೂ ಆತಂಕ ಸಭೆಯಿಂದ ವ್ಯಕ್ತವಾಗಿದ್ದು, ಅದರ ಬಗ್ಗೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಕೆಲವೆಡೆ 12 ಗಂಟೆಯವರೆಗೂ ಬಾರ್, ಪಬ್‌ಗಳು ಸೌಂಡ್ ಹಾಕಿಕೊಂಡಿರುವ ಬಗ್ಗೆಯೂ ಚರ್ಚೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುವವರ ವಿರುದ್ಧವೂ ಕ್ರಮ ಜರಗಿಸುವಂತೆ ಆಗ್ರಹ ಮಾಡಿದ್ದಾರೆ. ಮಾಧ್ಯಮ ಟಿಆರ್‌ಪಿ ಸಲುವಾಗಿ ಒಂದು ವಿಷಯವನ್ನೇ ಮೇಲಿಂದ ಮೇಲೆ ತೋರಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಜಿಲ್ಲೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುವಂತೆ ಮಾಡಲಾಗುತ್ತಿದೆ ಎಂಬ ಸಭೆಯಲ್ಲಿ ಭಾಗವಹಿಸಿದ್ದವರಿಂದ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಪ್ರಚಾರ, ಪ್ರಚೋದನಕಾರಿ ಹೇಳಿಕೆ ನೀಡುವವರ ಬಗ್ಗೆ ಕ್ರಮ ಜರಗಿಸಲು ಬಂದ ಸೂಚನೆಯನ್ನೂ ಪರಿಗಣಿಸಿ ಕ್ರಮ ವಹಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸ್ಥಳೀಯ ಎಲ್ಲಾ ಜನಪ್ರತಿನಿಧಿಗಳನ್ನು ಒಳಗೊಂಡ ಶಾಂತಿ ಸಭೆ ಮುಂದಿನ ವಾರದಲ್ಲೇ ನಡೆಸಲಾಗುವುದು. ಇದೀಗ ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಈ ಸಭೆ ನಡೆಸಲಾಗಿದೆ. ಮುಂದೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವವರೆಗೆ ಹಂತ ಹಂತವಾಗಿ ಸರಣಿ ಶಾಂತಿ ಸಭೆಗಳನ್ನು ನಡೆಸಲಾಗುವುದು ಎಂದರು.
ಪ್ರಚೋದನಾಕಾರಿ ಭಾಷಣಗಳ ಬಗ್ಗೆ ದೂರು ಬಂದರೆ ಕ್ರಮ
ಜಿಲ್ಲೆಯಲ್ಲಿ ಪ್ರಚೋದನಾಕಾರಿ ಭಾಷಣಗಳಿಂದ ಅಶಾಂತಿಗೆ ಕಾರಣವಾಗುತ್ತಿದೆ ಎಂಬುದಾಗಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಕುರಿತಂತೆ ಪ್ರತಿಕ್ರಿಯಿಸಿದ ಎಡಿಜಿಪಿ ಇಂತಹ ಪ್ರಚೋದನಕಾರಿ ಭಾಷಣಗಳ ಕುರಿತಂತೆ ದೂರು ಬಂದಲ್ಲಿ ಹಿಂದೆಯೂ ಕ್ರಮ ವಹಿಸಿದ್ದೇವೆ. ಮುಂದೆಯೂ ದೂರು ಬಂದರೆ ಕ್ರಮ ವಹಿಸಲಾಗುವುದು. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ಸಾಲದು ಎಂದು ಹೇಳಿದರು.
ಸಭೆಯಲ್ಲಿ ಐಜಿಪಿ ದೇವ ಜ್ಯೋತಿ ರೇ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಇತರ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ನಡೆದ ಶಾಂತಿ ಸಭೆಯಲ್ಲಿ ಬಹುತೇಕ ಹಿಂದೂ ಧಾರ್ಮಿಕ ಹಾಗೂ ಹಿಂದುತ್ವ ಸಂಘಟನೆಗಳು ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರು ಗೈರು ಹಾಜರಾಗಿದ್ದರು. ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೂ ಅವಕಾಶ ನಿರಾಕರಿಸಲಾಗಿತ್ತು. ಮುಖ್ಯವಾಗಿ ಸಭೆಯ ನೇತೃತ್ವ ವಹಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರೇ ಹಾಜರಿರಲಿಲ್ಲ. ಮಾತ್ರವಲ್ಲದೆ ಎಲ್ಲಾ ಶಾಸಕರು ಕೂಡಾ ಗೈರಾಗಿದ್ದರು. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಕೆಲ ಪಕ್ಷಗಳ ನಾಯಕರು ಹಾಗೂ ಇತರ ಕೆಲವರು ಭಾಗವಹಿಸಿದ್ದರು.








