ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ: ಕಮಿಷನರ್ ಶಶಿಕುಮಾರ್

ಕಮಿಷನರ್ ಶಶಿಕುಮಾರ್
ಮಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ಅನಗತ್ಯ ಸುದ್ದಿಗಳನ್ನು ಫಾರ್ವಾಡ್ ಮಾಡುವುದು, ಪ್ರಸಾರ ಮಾಡುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣಾ ಘಟಕದ ಸುಮಾರು 10 ಮಂದಿ ಸಿಬ್ಬಂದಿ ನಿರಂತರವಾಗಿ ಊಹಾಪೋಹಗಳು, ಆಕ್ಷೇಪಾರ್ಹ ವಿಷಯಗಳು ಸುಳ್ಳು ಸುದ್ದಿಗಳನ್ನು ಫಾರ್ವಾಡ್ ಮಾಡುತ್ತಿರುವವರ ಮೇಲೆಯೂ ನಿಗಾ ಇರಿಸಿದೆ. ಅಂತಹ ಅಪಪ್ರಚಾರ ಮಾಡುತ್ತಿರುವವ ಮೊಬೈಲ್ ಸಂಖ್ಯೆಗಳನ್ನು ಕಂಡು ಹಿಡಿಯಲಾಗುತ್ತಿದೆ. ಸದ್ಯ ಅಧಿಕಾರಿಗಳು ಅಹಿತಕರ ಘಟನೆಗಳ ಆರೋಪಿಗಳ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದು, ಅದು ಆದಾಕ್ಷಣ ಪತ್ತೆಹಚ್ಚಲಾದ ನಂಬರ್ಗಳ ವಿರುದ್ಧ ಕ್ರಮ ವಹಿಸಲಾಗುವುದು. ಈ ರೀತಿ ಸುಳ್ಳು ಸುದ್ದಿಗಳನ್ನು ಹಂಚುತ್ತಿರುವವರನ್ನು ಅವರ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವವರಿಗೆ ಕೋರ್ಟ್ ಕಚೇರಿಗೆ ಅಲೆದಾಡಿಸಿದಾಗಲೇ ಬುದ್ದಿ ಬರಲಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
ಸುರತ್ಕಲ್ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಆರಂಭದಲ್ಲಿ 14 ಮಂದಿಯನ್ನು ವಶಕ್ಕೆ ಪಡೆದು ವಿಚಾರಗೊಳಪಡಿಸಲಾಗಿತ್ತು. ಬಳಿಕ ಮತ್ತೆ 21 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿತ್ತು. ನಿನ್ನೆ ರಾತ್ರಿಯಿಂದ ಮತ್ತೆ 16 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.





