ಕಾದಂಬರಿ ವಿರುದ್ಧ ದೂರು: ಬೂಕರ್ ಪ್ರಶಸ್ತಿ ವಿಜೇತೆ ಗೀತಾಂಜಲಿಶ್ರೀ ಅವರ ಸನ್ಮಾನ ಕಾರ್ಯಕ್ರಮ ರದ್ದು

Photo: Twitter
ಆಗ್ರಾ(ಉ.ಪ್ರ),ಜು.30: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಗೀತಾಂಜಲಿ ಶ್ರೀ ಅವರ ಪ್ರಶಸ್ತಿ ಪುರಸ್ಕೃತ ಕಾದಂಬರಿ ‘ರೇತ್ ಸಮಾಧಿ’ಯ ವಿರುದ್ಧ ದೂರು ದಾಖಲಾಗಿರುವುದರಿಂದ ಶನಿವಾರ ಇಲ್ಲಿ ಆಯೋಜಿಸಲಾಗಿದ್ದ ಅವರ ಸನ್ಮಾನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಉ.ಪ್ರದೇಶದ ಹಥರಾಸ್ ನಿವಾಸಿ ಸಂದೀಪ್ ಕುಮಾರ್ ಪಾಠಕ್ ಎನ್ನುವವರು ಈ ವಾರದ ಆರಂಭದಲ್ಲಿ ದೂರನ್ನು ಸಲ್ಲಿಸಿದ್ದು, ಕಾದಂಬರಿಯು ಹಿಂದು ದೇವತೆಗಳಾದ ಶಿವ ಮತ್ತು ಪಾರ್ವತಿ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಆರೋಪಿಸಿದ್ದಾರೆ.
ಟ್ವೀಟ್ವೊಂದರಲ್ಲಿ ಪಾಠಕ್,ಈ ವಿಷಯದಲ್ಲಿ ಎಫ್ಐಆರ್ ದಾಖಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಜ್ಯ ಪೊಲೀಸ್ ವರಿಷ್ಠರನ್ನು ಆಗ್ರಹಿಸಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಫ್ಐಆರ್ ದಾಖಲಿಸಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸುವ ಮುನ್ನ ಕಾದಂಬರಿಯನ್ನು ತಾವು ಓದುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿಷಯವು ಬೆಳಕಿಗೆ ಬರುತ್ತಿದ್ದಂತೆ ಗೀತಾಂಜಲಿ ಶ್ರೀ,ತಾನು ನೊಂದಿದ್ದೇನೆ ಮತ್ತು ಸದ್ಯಕ್ಕೆ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವುದಿಲ್ಲ ಎಂದು ಸಂಘಟಕರಿಗೆ ತಿಳಿಸಿದ್ದಾರೆ.
ಹಥರಾಸ್ನಲ್ಲಿಯ ದೂರಿನ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಬಳಿಕ ಕೆಲವು ಸಮಾಜವಿರೋಧಿ ಶಕ್ತಿಗಳು ದಿಲ್ಲಿಯ ಜೆಎನ್ಯುದಲ್ಲಿ ನಡೆದ ಸನ್ಮಾನ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದವು ಎಂದು ಗೀತಾಂಜಲಿ ಶ್ರೀ ಬುಧವಾರ ಸಂಘಟಕರಿಗೆ ತಿಳಿಸಿದ್ದರು.
‘ನನ್ನ ಪುಸ್ತಕವನ್ನು ಬಲವಂತದಿಂದ ರಾಜಕೀಯ ವಿವಾದಕ್ಕೆ ಎಳೆಯಲಾಗುತ್ತಿದೆ. ಕಾದಂಬರಿಯಲ್ಲಿ ಮಾಡಲಾಗಿರುವ ಉಲ್ಲೇಖಗಳು ಭಾರತೀಯ ಪುರಾಣಗಳ ಅವಿಭಾಜ್ಯ ಅಂಗಗಳಾಗಿವೆ. ಇವುಗಳನ್ನು ಆಕ್ಷೇಪಿಸುವವರು ನ್ಯಾಯಾಲಯದಲ್ಲಿ ಹಿಂದು ಪುರಾಣ ಗ್ರಂಥಗಳನ್ನು ಪ್ರಶ್ನಿಸಬೇಕು ’ಎಂದೂ ಅವರು ಹೇಳಿದ್ದಾರೆ.
ಡೈಸಿ ರಾಕ್ವೆಲ್ ಅವರು ‘ಟೋಂಬ್ ಆಫ್ ಸ್ಯಾಂಡ್’ ಶೀರ್ಷಿಕೆಯಡಿ ಇಂಗ್ಲಿಷ್ಗೆ ಅನುವಾದಿಸಿರುವ ‘ರೇತ್ ಸಮಾಧಿ’ ಕಳೆದ ಮೇ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ 2022 ಅನ್ನು ಗೆದ್ದುಕೊಂಡಿದೆ. ಅದು ವಿಶ್ವಾದ್ಯಂತದ ಅನುವಾದಿತ ಕೃತಿಗಳಿಗಾಗಿರುವ ಪ್ರಶಸ್ತಿಯನ್ನು ಗೆದ್ದಿರುವ ಮೊದಲ ಹಿಂದಿ ಹಾಗೂ ಮೊದಲ ಭಾರತದ ಮತ್ತು ದಕ್ಷಿಣ ಏಶ್ಯಾದ ಕಾದಂಬರಿಯಾಗಿದೆ.
ಆಗ್ರಾದ ಸಾಂಸ್ಕೃತಿಕ ಸಂಘಟನೆ ರಂಗೀಲಾ ಮತ್ತು ಆಗ್ರಾ ಥಿಯೇಟರ್ ಕ್ಲಬ್ ಶನಿವಾರ ಸಂಜೆ ನಗರದ ಕ್ಲಾರ್ಕ್ಸ್ ಶಿರಾಝ್ ಹೋಟೆಲ್ನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.
‘ಉ.ಪ್ರದೇಶವು ಗೀತಾಂಜಲಿ ಶ್ರೀಯವರ ಜನ್ಮಸ್ಥಳವಾಗಿದೆ. ಸರಕಾರ,ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶ್ರೀಯವರನ್ನು ಸನ್ಮಾನಿಸಬೇಕಿತ್ತು. ಬದಲಿಗೆ ನಾವು ಈ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಿದ್ದೇವೆ. ಇದು ನಾಚಿಕೆಗೇಡಿನ ವಿಷಯವಾಗಿದೆ ’ಎಂದು ರಂಗೀಲಾದ ವಕ್ತಾರ ರಾಮಭರತ ಉಪಾಧ್ಯಾಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.







