ತೀಸ್ತಾ, ಶ್ರೀಕುಮಾರ್ ಗೆ ಜಾಮೀನು ನೀಡಲು ನಿರಾಕರಿಸಿದ ಅಹ್ಮದಾಬಾದ್ ನ್ಯಾಯಾಲಯ

Photo: Indianexpress/PTI
ಅಹ್ಮದಾಬಾದ್: ಗುಜರಾತ್ನಲ್ಲಿ 2002ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ್ದಾರೆಂಬ ಆರೋಪದ ಮೇಲೆ ಬಂಧಿತರಾಗಿರುವ ಹೋರಾಟಗಾರ್ತಿ ತೀಸ್ತಾ ಸೇಟಲ್ವಾಡ್, ಮಾಜಿ ಡಿಜಿಪಿ ಆರ್ ಬಿ ಶ್ರೀಕುಮಾರ್ ಅವರಿಗೆ ಅಹ್ಮದಾಬಾದ್ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿದೆ.
ಜಾಮೀನು ಅರ್ಜಿ ಮೇಲಿನ ಆದೇಶ ನೀಡುವುದನ್ನು ನ್ಯಾಯಾಧೀಶರು ಈ ವಾರ ಹಲವು ಬಾರಿ ಮುಂದೂಡಿದ್ದರು.
ಜುಲೈ 20ರಂದು ರಾಜ್ಯ ಸರಕಾರವು ತೀಸ್ತಾ ಮತ್ತು ಶ್ರೀಕುಮಾರ್ ಅವರಿಬ್ಬರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು. ಶ್ರೀಕುಮಾರ್, ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ಟ್ ಅವರೊಡಗೂಡಿ ತೀಸ್ತಾ ದೊಡ್ಡ ಸಂಚಿನ ಭಾಗವಾಗಿದ್ದರು ಹಾಗೂ ಗುಜರಾತ್ ಗಲಭೆಗಳ ನಂತರ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ್ದರು ಎಂದು ಜುಲೈ 15ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಗುಜರಾತ್ ಪೊಲೀಸರು ತಿಳಿಸಿದ್ದರು.
ಮಾಜಿ ಕಾಂಗ್ರೆಸ್ ಸಂಸದ ದಿವಂಗತ ಅಹ್ಮದ್ ಪಟೇಲ್ ಅವರ ಸೂಚನೆಯಂತೆ ಈ ಸಂಚು ರೂಪಿಸಲಾಗಿತ್ತು ಎಂದೂ ಪೊಲೀಸರು ಹೇಳಿದ್ದರು. ಆದರೆ ತೀಸ್ತಾ ಮತ್ತು ಶ್ರೀಕುಮಾರ್ ಇಬ್ಬರೂ ಈ ಆರೋಪವನ್ನು ನಿರಾಕರಿಸಿದ್ದರು.
ತಮ್ಮ ವಿರುದ್ಧದ ಆರೋಪಕ್ಕೆ ಯಾವುದೇ ಪುರಾವೆಯಿಲ್ಲ ಎಂದೂ ಇಬ್ಬರು ವಾದಿಸಿದ್ದರು.





