ಮೂರು ಕೊಲೆ ಪ್ರಕರಣ: ಎನ್‌ಐಎ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಆಗ್ರಹ

ಮಂಗಳೂರು, ಜು.30: ಬೆಳ್ಳಾರೆಯ ಮಸೂದ್, ನೆಟ್ಟಾರಿನ ಪ್ರವೀಣ್, ಮಂಗಳಪೇಟೆಯ ಫಾಝಿಲ್ ಕೊಲೆ ಪ್ರಕರಣವನ್ನು ಎನ್‌ಐಎ ಅಥವಾ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೊಳಪಡಿಸಬೇಕು ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಮುವಾದಿ ಸಂಘಟನೆಗಳ ಕುಮ್ಮಕ್ಕಿನಿಂದ ಈ ಕೊಲೆ ನಡೆದಿದೆ. ಇದಕ್ಕೆ ಎಗ್ಗಿಲ್ಲದೆ ನಡೆದ ದ್ವೇಷ ಭಾಷಣಗಳೇ ಕಾರಣವಾಗಿದೆ. ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಆರಂಭದಲ್ಲೇ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಿದ್ದರೆ ಅಮಾಯಕರ ಕೊಲೆಗಳನ್ನು ತಪ್ಪಿಸಬಹುದಿತ್ತು ಎಂದರು.
ಮೂವರ ಕೊಲೆ ಕೃತ್ಯ ಖಂಡನೀಯ. ರಾಜ್ಯ ಸರಕಾರ ಮತ್ತು ಜನಪ್ರತಿನಿಧಿಗಳು ಶವ ರಾಜಕಾರಣ ಮಾಡಿದ್ದಾರೆ. ಸರಕಾರದ ಈ ನಡೆ ಅಕ್ಷಮ್ಯ. ಕೊಲೆಯಾದ ಯುವಕರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿಯೂ ಸರಕಾರ ತಾರತಮ್ಯ ಎಸಗಿದೆ. ಬಸವರಾಜ್ ಬೊಮ್ಮಾಯಿ ಕನ್ನಡಿಗರ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದಾರೆ. ನೆಟ್ಟಾರಿನ ಪ್ರವೀಣ್ ಮನೆಗೆ ಹೋದ ಮುಖ್ಯಮಂತ್ರಿ ಸಮೀಪದ ಮಸೂದ್ ಮನೆಗೆ ಭೇಟಿ ನೀಡಿ ಆ ಕುಟುಂಬಕ್ಕೆ ಸಾಂತ್ವನ ಹೇಳದಿರುವುದು ವಿಪರ್ಯಾಸ ಎಂದು ಲುಕ್ಮಾನ್ ಬಂಟ್ವಾಳ ಹೇಳಿದರು.
ಮುಖ್ಯಮಂತ್ರಿ, ಎಡಿಜಿಪಿ ಮಂಗಳೂರಿನಲ್ಲಿರುವಾಗಲೇ ಸುರತ್ಕಲ್‌ನಲ್ಲಿ ಕೊಲೆಯಾಗಿದೆ. ಪೊಲೀಸ್ ಇಲಾಖೆಯ ಗುಪ್ತಚರ ಇಲಾಖೆಯ ವೈಫಲ್ಯವು ಇದನ್ನು ಎತ್ತಿತೋರಿಸುತ್ತಿದೆ. ಗೃಹಸಚಿವರ ಮನೆಗೆ ಅವರದೇ ಪಕ್ಷದ ಅಂಗ ಸಂಸ್ಥೆಯಾದ ಎಬಿವಿಪಿ ನುಗ್ಗಿ ರಾಜೀನಾಮೆಗೆ ಆಗ್ರಹಿಸಿದೆ. ಪ್ರಕರಣಗಳನ್ನು ನಿಭಾಯಿಸುವಲ್ಲಿ ಗೃಹಸಚಿವರು ವಿಫಲರಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಅಭಿಷೇಕ್ ಬೆಳ್ಳಿಪ್ಪಾಡಿ. ಸರ್ಫ್ರಾಝ್ ಬಾಳ, ರಮಾನಂದ ಬೋಳಾರ್, ಇಸ್ಮಾಯೀಲ್, ನವೀದ್ ಮತ್ತಿತರರು ಉಪಸ್ಥಿತರಿದ್ದರು.