ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿನ್ನಡೆ ಆಗಿದೆ: ಡಿ.ವಿ. ಸದಾನಂದ ಗೌಡ

ಸುಳ್ಯ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಲೆಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಆಗಿದೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾಗಿದೆ. ಆದುದರಿಂದ ಈ ರೀತಿ ದುಷ್ಕೃತ್ಯಗಳು ಮರುಕಳಿಸುತ್ತಿದೆ. ಆದುದರಿಂದ ಕಾನೂನು ಪಾಲನೆಯಲ್ಲಿ ದಿಟ್ಟ ಹೆಜ್ಜೆ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಈ ಕಾನೂನು ಸುವ್ಯವಸ್ಥೆಯಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ. ಕಾರ್ಯಕರ್ತರ ಕೊಲೆ, ಆಗಾಗ್ಗೆ ಸೃಷ್ಠಿಯಾಗುವ ಪ್ರಕ್ಷುಬ್ಧ ವಾತಾವರಣ ಹತೋಟಿಗೆ ವಿಶೇಷವಾದ ಕಾರ್ಯಾಚರಣೆ ಮಾಡಬೇಕಾಗಿದೆ. ಪೊಲೀಸ್ ಇಲಾಖೆ ಇದರ ಬಗ್ಗೆ ವಿಶೇಷ ಒತ್ತು ಕೊಟ್ಟು ಕಟ್ಟೆಚ್ಚರ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಪೊಲೀಸರ ಬಗ್ಗೆ, ಕಾನೂನಿನ ಹೆದರಿಕೆ ಇಲ್ಲದ ವಾತಾವರಣ ಆಗಿರುವುದು ದುರ್ದೈವ. ಈ ರೀತಿ ಕೃತ್ಯ ಮಾಡಿದವರನ್ನು ಪೊಲೀಸ್ ಇಲಾಖೆ, ಸರಕಾರ ಬಿಡುವುದಿಲ್ಲ ಎಂಬ ಭಯದ ವಾತಾವರಣ ಸೃಷ್ಠಿಯಾಗಬೇಕು. ಬಾಯಿ ಮಾತಿನಲ್ಲಿ ಯಾವುದೇ ಪರಿಹಾರ ಆಗುವುದಿಲ್ಲ. ಕಾರ್ಯಾಚರಣೆ ಆಗಬೇಕು, ಅದಕ್ಕಾಗಿ ಪೊಲೀಸ್ ಇಲಾಖೆಯನ್ನು ಬಲ ವರ್ಧನೆ ಮಾಡಬೇಕು. ಅದಕ್ಕೆ ಸರಕಾರ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ಕೊಡಬೇಕು ಎಂದರು.
ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಆಗಬೇಕು. ಪ್ರಕರಣವನ್ನು ಎನ್‍ಐಎ ಕೊಡಬೇಕು ಎಂದು ನಿಶ್ಚಯ ಮಾಡಲಾಗಿದ್ದು, ಎನ್‍ಐಎ ಶೀಘ್ರ ಪ್ರಕರಣವನ್ನು ಕೈಗೆತ್ತಿಕೊಂಡು ಇದರ ಹಿಂದಿನ ಜಾಲವನ್ನು ಭೇದಿಸಬೇಕು ಎಂದು ಬಿಜೆಪಿ ಸಂಸದರು ಕೇಂದ್ರ ಗೃಹ ಸಚಿವರನ್ನು ಭೇಟಿ ಒತ್ತಾಯ ಮಾಡುತ್ತೇವೆ ಎಂದರು.
ಈ ರೀತಿ ಪ್ರಕರಣ ಎಲ್ಲಿ ಆದರೂ ಅವರ ಮನೆಗೆ ಸರಕಾರ ಮತ್ತು ಜನಪ್ರತಿನಿಧಿಗಳು ಹೋಗಿ ಅವರಿಗೆ ಸಾಂತ್ವನ, ಸೂಕ್ತ ರಕ್ಷಣೆ ಕೊಡಬೇಕು, ಅದು ಯಾರೇ ಆದರೂ ಹೋಗಬೇಕಾಗಿರುವುದು ಸರಕಾರದ ಕರ್ತವ್ಯ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖಂಡರ ವಿರುದ್ಧ ಕಾರ್ಯಕರ್ತರ ಆಕ್ರೋಶದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, "ಬಿಜೆಪಿ ಮುಖಂಡರ, ಜನಪ್ರತಿನಿಧಿಗಳ ಕಾರ್ಯಾಚರಣೆ, ಶೈಲಿ ಬದಲಾವಣೆ ಆಗಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ. ಅದಕ್ಕೆ ಅನುಸಾರವಾಗಿ ಬದಲಾವಣೆ ಆಗಬೇಕಾಗಿದೆ" ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬಿಜೆಪಿಯ ನೇತೃತ್ವದಲ್ಲಿ ಸಾಕಷ್ಟು ಪ್ರತಿಭಟನೆ, ಹೋರಾಟ ನಡೆಸಿದ್ದೇವೆ. ನಮ್ಮ ಸರಕಾರ ಬಂದಾಗ ಹಿಂದೂ ಸಮಾಜಕ್ಕೆ ಸೂಕ್ತ ರಕ್ಷಣೆ ಸಿಗಬಹುದು ಎಂಬ ಭಾವನೆ ಇತ್ತು. ಆದರೆ ಸರಕಾರ ಬಂದಾಗ ಆ ನಿಟ್ಟಿನಲ್ಲಿ ಸ್ವಲ್ಪ ಕೊರತೆ ಆಗಿದೆ ಎಂದು ಅವರು ಹೇಳಿದರು. ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರದ ಹೊಣೆ. ಅದಕ್ಕೆ ಇನ್ನಷ್ಟು ವೇಗ ಕೊಡುವ ಅಗತ್ಯ ಇದೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಎನ್.ಮನ್ಮಥ, ರಾಕೇಶ್ ರೈ ಕೆಡೆಂಜಿ, ದಿನೇಶ್ ಮೆದು, ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಪನ್ನೆ, ಶ್ರೀನಾಥ್ ಬಾಳಿಲ, ಅಶೋಕ್ ರೈ ಕೋಡಿಂಬಾಡಿ, ಶಶಿಧರ ರೈ ಬಾಲ್ಯೋಟ್ಟು ಮತ್ತಿತರರು ಉಪಸ್ಥಿತರಿದ್ದರು. ಕುಟುಂಬ ವರ್ಗದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಡಿ.ವಿ.ಸದಾನಂದ ಗೌಡರು ಆರ್ಥಿಕ ನೆರವು ನೀಡಿದರು.