ಅಕ್ರಮ ಹಣ ವರ್ಗಾವಣೆ ಪ್ರಕರಣ: ಈ.ಡಿ.ಯಿಂದ ಕಾರ್ವಿ ಗ್ರೂಪ್ ನ 110.70 ಕೋಟಿ ರೂ. ಆಸ್ತಿ ಜಪ್ತಿ

ಹೊಸದಿಲ್ಲಿ,ಜು.30: ಕಾರ್ವಿ ಸ್ಟಾಕ್ ಬ್ರೋಕಿಂಗ್ ಲಿ.(ಕೆಎಸ್ಬಿಎಲ್), ಅದರ ಸಿಎಂಡಿ ಸಿ.ಪಾರ್ಥಸಾರಥಿ ಮತ್ತು ಇತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ 110.70 ಕೋ.ರೂ.ಗಳ ಆಸ್ತಿಗಳನ್ನು ತಾನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಈ.ಡಿ.)ವು ಶನಿವಾರ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣವು ಬ್ಯಾಂಕುಗಳ ದೂರುಗಳ ಮೇರೆಗೆ ಹೈದರಾಬಾದ್ ಪೊಲೀಸರು ದಾಖಲಿಸಿರುವ ಎಫ್ಐಆರ್ಗಳನ್ನು ಆಧರಿಸಿದೆ. ಕೆಎಸ್ಬಿಎಲ್ ತನ್ನ ಗ್ರಾಹಕರ ಸುಮಾರು 2,800 ಕೋ.ರೂ.ವೌಲ್ಯದ ಶೇರುಗಳನ್ನು ಅಕ್ರಮವಾಗಿ ಅಡವಿರಿಸಿ ತಮ್ಮಿಂದ ಭಾರೀ ಮೊತ್ತದ ಸಾಲಗಳನ್ನು ಪಡೆದಿತ್ತು. ಎನ್ಎಸ್ಇ ಮತ್ತು ಸೆಬಿ ಆದೇಶಗಳಂತೆ ಗ್ರಾಹಕರ ಶೇರುಗಳನ್ನು ಬಿಡುಗಡೆ ಮಾಡಿದ ಬಳಿಕ ಈ ಸಾಲಗಳು ಅನುತ್ಪಾದಕ ಆಸ್ತಿ (ಎನ್ಪಿಎ)ಗಳಾಗಿವೆ ಎಂದು ಬ್ಯಾಂಕುಗಳು ತಮ್ಮ ದೂರುಗಳಲ್ಲಿ ಆರೋಪಿಸಿದ್ದವು.
ಇತ್ತೀಚಿನ ಜಪ್ತಿಯಿಂದಾಗಿ ಪ್ರಕರಣದಲ್ಲಿ ಈ.ಡಿ.ಒಟ್ಟು 2,095 ಕೋ.ರೂ.ಗಳ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡಂತಾಗಿದೆ.
ಈ.ಡಿ.ಈ ವರ್ಷದ ಜನವರಿಯಲ್ಲಿ ಪಾರ್ಥಸಾರಥಿ,ಕಾರ್ವಿ ಗ್ರೂಪ್ನ ಮುಖ್ಯ ಹಣಕಾಸು ಅಧಿಕಾರಿ ಕೃಷ್ಣ ಹರಿ ಅವರನ್ನು ಬಂಧಿಸಿತ್ತು. ಅವರಿಬ್ಬರೂ ಈಗ ಜಾಮೀನಿನಲ್ಲಿ ಹೊರಗಿದ್ದಾರೆ.





