ಪ್ರಚೋದನಕಾರಿ ಹೇಳಿಕೆ: ಕಾಳಿಸ್ವಾಮಿ ವಿರುದ್ಧ ದೂರು

ತುಮಕೂರು: ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿ ಕಾಳಿಸ್ವಾಮಿ ವಿರುದ್ಧ ಸುಮೊಟೋ ಪ್ರಕರಣವನ್ನು ದಾಖಲಿಸಿ ಕ್ರಮಗೊಳ್ಳುವಂತೆ ಆಗ್ರಹಿಸಿ ದೂರು ಸಲ್ಲಿಕೆಯಾಗಿದೆ.
ತುಮಕೂರು ಪೋಲಿಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡಿರುವ ಪ್ರಗತಿಪರ ಸಂಘಟನೆಗಳು, “ಕಾಳಿಸ್ವಾಮಿ ಅಲಿಯಾಸ್ ರಿಷಿಕುಮಾರ” ಎಂಬುವವರು ದಿನಾಂಕ: 29/೦7/2022 ರಂದು (ಶುಕ್ರವಾರ) ಬಜರಂಗದಳ ಮತ್ತು ಹಿಂದೂಪರಿಷತ್ ನವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಮಂಗಳೂರಿನ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನನ್ನು ಹೊಡೆದಿದ್ದಾರೆ, ನಮ್ಮವರೇ (ಹಿಂದೂ ಸಂಘಟನೆಯವರು) ಹೊಡೆದಿದ್ದರೆ ನಾನು ಅವರನ್ನು ಅಭಿನಂದಿಸುತ್ತೇನೆ, ಇನ್ನೂ 9 ಮುಸ್ಲಿಮರ ತಲೆಗಳು ಬೇಕು ಎಂದು ಹೇಳುವುದಲ್ಲದೇ, ಘನತೆವೆತ್ತ ಮುಖ್ಯಮಂತ್ರಿಗಳನ್ನು ಎತ್ತಲಿ ಅವರಿಗೆ ತಾಕತ್ತಿದ್ರೆ, ಗೃಹ ಸಚಿವರನ್ನು ಸೇರಿದಂತೆ ಹಲವಾರು ಮುಖಂಡರ ಜೀವ ಹತ್ಯೆ ಮಾಡುವಂತೆ ಸಂವಿಧಾನ ವಿರೋಧಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಸ್ವೀಕರಿಸಿ ಮಾತನಾಡಿದ ಎಎಸ್‌ಪಿ ಉದೇಶ್‌ಕುಮಾರ್, 'ಇದು ಅಚಾನಕ್ಕಾಗಿ ನಡೆದಿರುವ ಘಟನೆ ಕೋಮು ಅಶಾಂತಿ ಸೃಷ್ಟಿಸುವ ಯಾರೋಬ್ಬರನ್ನು ಸುಮ್ಮನೇ ಬಿಡುವುದಿಲ್ಲ ಅವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಕಾರ್ಯಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಪೋಲಿಸ್ ಇಲಾಖೆ ಗಮನಕ್ಕೂ ತರದೇ ಈತರದ ಪ್ರಕ್ಷುಬ್ದ ವಾತವರಣಕ್ಕೆ ಕಾರಣೀಕರ್ತರಾದವರ ಮೇಲು ಕ್ರಮಕ್ಕೆ ಮುಂದಾಗುತ್ತೇವೆ' ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಎ,ನರಸಿಂಹಮೂರ್ತಿ, ಸೈಯದ್‌ಮುಜೀಬ್, ಸುಬ್ರಮಣ್ಯ, ತಾಜುದ್ದೀನ್‌ಷರೀಫ್, ದಲಿತ ಸಂಘಟನೆಗಳ ಮುಖಂಡರುಗಳಾದ ಪಿ,ಎನ್,ರಾಮಯ್ಯ, ಕೇಬಲ್ ರಘು, ಕೊಟ್ಟಶಂಕರ್, ಮರಳೂರು ಕೃಷ್ಣಮೂರ್ತಿ, ಜೆಸಿಬಿ ವೆಂಕಟೇಶ್, ರಾಮಯ್ಯ,ಟಿಸಿ, ಗಿರೀಶ್, ಮತ್ತು ಅಲ್ಪಸಂಖ್ಯಾತ ಮುಖಂಡರಾದ ಸೈಯದ್‌ಬುರ್ಹಾನುದ್ದೀನ್, ಕೊಳಗೇರಿ ಹಿತರಕ್ಷಣಾ ಸಮಿತಿಯ ಅರುಣ್, ತಿರುಮಲಯ್ಯ, ಸಂವಿಧಾನ ಸ್ನೇಹಿ ಬಳಗದ ತೇಜಸ್‌ಕುಮಾರ್, ಪಿಯುಸಿಎಲ್ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.








