ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.30: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆಗೈದಿರುವ ಘಟನೆ ಇಲ್ಲಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆನೇಪಾಳ್ಯದ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ಇರ್ಫಾನ್(28) ಕೊಲೆಯಾಗಿದ್ದು, ಕೃತ್ಯ ನಡೆಸಿದ ಖಾಸಿಂನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ಗೌಡ ತಿಳಿಸಿದ್ದಾರೆ.
ಇವರಿಬ್ಬರೂ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದು ಮುಖಾಮುಖಿಯಾದ ವೇಳೆಗೆ ಕ್ಷುಲ್ಲಕ ವಿಚಾರವಾಗಿ ಜಗಳ ನಡೆದು ದ್ವೇಷ ಬೆಳೆದಿತ್ತು. ಆನೇಪಾಳ್ಯದ ಬಳಿ ಶುಕ್ರವಾರ ರಾತ್ರಿ 11ರ ವೇಳೆ ಎದುರು ಬದುರಾಗಿ ಬಂದಿದ್ದು, ಮತ್ತೆ ಜಗಳ ಉಂಟಾಗಿ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡು ಇರ್ಫಾನ್ ತೊಡೆಗೆ ಚಾಕುವಿನಿಂದ ಇರಿದ ಖಾಸಿಂ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಆತನನ್ನು ಸ್ಥಳೀಯರು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮುಂಜಾನೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ ಆಶೋಕನಗರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.





