ಅಪಾಯಕಾರಿ ಹಳೆಯ ಕಟ್ಟಡಗಳ ಬಗ್ಗೆ ತೆರವಿಗೆ ಕ್ರಮ: ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

ಕುಂದಾಪುರ, ಜು.30: ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಯ ಆಸು- ಪಾಸಿನಲ್ಲಿ ಹಳೆಯ ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇವುಗಳನ್ನು ತೆರವುಗೊಳಿಸಲು ನೋಟೀಸ್ ನೀಡಬೇಕು ಎಂದು ಕುಂದಾಪುರ ಪುರಸಭಾ ಸದಸ್ಯರು ಒತ್ತಾಸಿಯಿದ್ದಾರೆ.
ಕುಂದಾಪುರ ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಚಂದ್ರಶೇಖರ್ ಖಾರ್ವಿ, ಈಗಾಗಲೇ ಪುರಸಭಾ ವ್ಯಾಪ್ತಿಯಲ್ಲಿನ ಹಳೆಯ ಕಟ್ಟಡವೊಂಡರ ತೆರವಿಗೆ ಸಾರ್ವಜನಿಕರಿಂದ ಪುರಸಭೆಗೆ ದೂರು ಬಂದಿದ್ದು ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಎಲ್ಲೆಲ್ಲಿ ಅಪಾಯಕಾರಿ ಕಟ್ಟಡಗಳಿವೆಯೋ ಅವೆಲ್ಲವನ್ನೂ ಪರಿಶೀಲಿಸಿ ಪುರಸಭೆ ಕಾಯ್ದೆಯನ್ವಯ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕಿತ್ತು ಹೋದ ತೇಪೆ ಕಾಮಗಾರಿ: ಯುಜಿಡಿ, ಜಲಸಿರಿ ಯೋಜನೆಗಳಿಂದ ಪುರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳು ಹೊಂಡ-ಗುಂಡಿಯಾಗಿದ್ದು, ಸವಾರರು ಸಂಕಷ್ಟಪಡುತ್ತಿದ್ದಾರೆ. ಚಿಕನ್‌ಸಾಲ್ ರಸ್ತೆಯೂ ಸೇರಿದಂತೆ ಅನೇಕ ಭಾಗಗಳಲ್ಲಿ ಇತ್ತೀಚೆಗೆ ನಡೆದ ತೇಪೆ ಕಾಮಗಾರಿ ಒಂದೇ ದಿನದಲ್ಲಿ ಕಿತ್ತು ಹೋಗಿದೆ ಎಂದು ಸದಸ್ಯರಾದ ಸಂತೋಷ್ ಶೆಟ್ಟಿ, ಶ್ರೀಧರ್ ಶೇರುಗಾರ್, ಅಶ್ವಿನ್ ಪ್ರದೀಪ್ ಆರೋಪಿಸಿದರು
.ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಹೆಚ್ಚು ಮಳೆ ಸುರಿದ ಹಿನ್ನೆಲೆ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಸವಾರರಿಗೆ ಅನುಕೂಲವಾಗಲು ತುರ್ತು ಕಾಮಗಾರಿ ನಡೆಸಿದ್ದೇವೆ. ಇನ್ನು ಹದಿನೈದು ದಿನದೊಳಗೆ ಪೂರ್ಣಪ್ರಮಾಣದ ಕಾಮಗಾರಿ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.ಪುರಸಭೆಯ ಖಾರ್ವಿಕೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಮೂರು ದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಪೈಪ್‌ಲೈನ್ ಕಾಮಗಾರಿ ನಡೆಸುವುದಿದ್ದರೆ ಮೊದಲೇ ಸಾರ್ವಜನಿಕರಿಗೆ ತಿಳಿಸಿ ಮಾಡಬೇಕು ಎಂದು ಸದಸ್ಯ ಚಂದ್ರಶೇಖರ್ ಖಾರ್ವಿ ಹೇಳಿದರು.
ಜಲಸಿರಿ ಯೋಜನೆ ಕ್ರಮಬದ್ದವಾಗಿ ಆಗದೆ ಪುರಸಭೆ ಹಸ್ತಾಂತರ ಮಾಡಿಕೊಳ್ಳಬಾರದು ಎಂದು ಅವರು ಒತ್ತಾಯಿಸಿದರು.ಜಲಸಿರಿ ಯೋಜನೆ ವಿಫಲ: ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ, ಜಲಸಿರಿ ಯೋಜನೆ ಶೇ.90ರಷ್ಟು ವಿಫಲವಾಗಿದೆ. ಪೈಪ್‌ಲೈನ್ ಗಾಗಿ ಅಗೆದ ರಸ್ತೆ, ಇಂಟರ್‌ಲಾಕ್ ಅಳವಡಿಕೆ ನೂರಕ್ಕೆ ನೂರು ಕಾಮಗಾರಿ ಸರಿ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕುತ್ತರಿಸಿದ ಮುಖ್ಯಾಧಿಕಾರಿ, ತೀವ್ರ ಮಳೆಗೆ ಪೈಪ್‌ಲೈನ್ ತುಂಡಾಗಿದ್ದರಿಂದ ಒಂದೇ ದಿನದಲ್ಲಿ ಕಾಮಗಾರಿ ಮುಗಿಸುವ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಕಾಮಗಾರಿ ನಡೆಸಲು ಸಮಸ್ಯೆ ಯಾಗಿದೆ. ಇದೀಗ 13 ವಾರ್ಡ್‌ಗಳಲ್ಲಿ 24 ಗಂಟೆ ನೀರಿನ ಪೂರೈಕೆ ಮಾಡು ತ್ತಿದ್ದು, ಇನ್ನುಳಿದ 10 ವಾರ್ಡ್‌ಗಳಿಗೆ ಬೆಳಗ್ಗೆ 8 ರಿಂದ 12ರತನಕ ನೀರು ಪೂರೈಕೆ ಮಾಡುತ್ತಿದ್ದೇವೆ. ಪಂಪು ಅಳವಡಿಸಿದ ಬಳಿಕ ಎಲ್ಲಾ ವಾರ್ಡ್‌ಗಳಿಗೂ ದಿನದ 24 ಗಂಟೆಯೂ ನೀರು ಪೂರೈಸುತ್ತೇವೆ ಎಂದರು.
ಸಾಲಿಗ್ರಾಮ ಕಸ ವಿಲೇವಾರಿ ಬಗ್ಗೆ ಚರ್ಚೆಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಸವನ್ನು ಕುಂದಾಪುರ ಪುರ ಸಭೆಯ ಡಂಪಿಂಗ್ ಯಾರ್ಡ್‌ನಲ್ಲಿ ವಿಲೇವಾರಿ ಮಾಡುವ ಕುರಿತು ಹಿಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಯಾವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಂದು ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ ಪ್ರಶ್ನಿಸಿದರು.
ಆಡಳಿತ ಪಕ್ಷದ ಸದಸ್ಯರಲ್ಲೇ ಈ ಬಗ್ಗೆ ಭಿನ್ನಮತವಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಿ ಎಂದ ಅವರು, ನಾವು ಜನರಿಂದ ಆಯ್ಕೆಯಾದವರು ನಾಳೆ ಜನರಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ನಿಮ್ಮ ಗೊಂದಲಗಳಿಗೆ ನಮ್ಮನ್ನು ಹೊಣೆಗಾರರಾಗಿ ಮಾಡಬೇಡಿ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಈ ಕುರಿತು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎಲ್ಲ ರೊಂದಿಗೂ ಚರ್ಚಿಸಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.







