ಉಡುಪಿ: ಇಪಿಎಫ್‌ಒ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ

ಉಡುಪಿ, ಜು.30: ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವತಿಯಿಂದ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಪ್ರಾದೇಶಿಕ ಕಚೇರಿಯ ಉಡುಪಿಯ ನೂತನ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಇಂದು ಶಿವಳ್ಳಿ ಗ್ರಾಮದ ಮಣಿಪಾಲದಲ್ಲಿ ನೆರವೇರಿತು.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಸಚಿವ ಭೂಪೇಂದ್ರ ಯಾದವ್ ಅವರು ಹೊಸದಿಲ್ಲಿಯಿಂದ ವರ್ಚುವಲ್ ಮೂಲಕ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಮಣಿಪಾಲದಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕರ್ನಾಟಕ- ಗೋವಾ ವಿಭಾಗದ ಹುಬ್ಬಳ್ಳಿ ಅಪರ ಕೇಂದ್ರೀಯ ಭವಿಷ್ಯನಿಧಿ ಆಯುಕ್ತ ಮಾರುತಿ ಭೋಯಿ, ಉಡುಪಿ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತ ಅಶ್ವಿನಿ ಕುಮಾರ್ ಗುಪ್ತ, ಉಡುಪಿ ಭವಿಷ್ಯನಿಧಿ ಸಂಘಟನೆ ಪ್ರಾದೇಶಿಕ ಆಯುಕ್ತ ಡಾ. ಅಜಯ್‌ಸಿಂಗ್ ಚೌಧರಿ ಅವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 2.87 ಲಕ್ಷ ಮಂದಿ ಪಿಎಫ್ ಸೌಲಭ್ಯವನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,607 ಉದ್ಯಮಗಳು, ಕಾರ್ಖಾನೆಗಳು, ಸಂಸ್ಥೆಗಳಿವೆ. 24,000 ಮಂದಿ ಪಿಂಚಣಿದಾರರು ಸಹ ಉಡುಪಿ ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬೀಡಿ, ಗೇರು ಉದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ.
ಮಣಿಪಾಲದಲ್ಲಿ 7.96 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಇಪಿಎಫ್ ಪ್ರಾದೇಶಿಕ ಕಚೇರಿ, ತಳಮಹಡಿ, ನೆಲ ಮಹಡಿ, ಒಂದು ಮತ್ತು ಎರಡನೇ ಮಹಡಿಗಳ ಸುಸಜ್ಜಿತ ಕಟ್ಟಡವಾಗಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನೂ ಹೊಂದಿರುತ್ತದೆ. ಎರಡು ವರ್ಷದೊಳಗೆ ಕಟ್ಟಡ ಕಾಮಗಾರಿ ಮುಕ್ತಾಯಗೊಂಡ ಬಳಿಕ ಪಿಎಫ್ ಹಾಗೂ ಪಿಂಚಣಿ ಸೌಲಭ್ಯ ಹೊಂದಿರುವ ಜಿಲ್ಲೆಯ ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ದೊರಕಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.








