6 ತಿಂಗಳುಗಳಲ್ಲಿ ಪಾಕ್ ಭದ್ರತಾಪಡೆಗಳ ಮೇಲೆ 434 ಭಯೋತ್ಪದಕ ದಾಳಿಗಳು
ಇಸ್ಲಾಮಬಾದ್,ಜು.30: ಪ್ರಸಕ್ತ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಪಾಕಿಸ್ತಾನದಲ್ಲಿ ಭದ್ರತಾಪಡೆಗಳ ಮೇಲೆ 434 ಭಯೋತ್ಪಾದಕ ದಾಳಿಗಳು ನಡೆದಿದ್ದು,ಕನಿಷ್ಠ 323 ಸೈನಿಕರು ಬಲಿಯಾಗಿದ್ದಾರೆಂದು ಎಂದು ಪಾಕ್ ಗೃಹ ಸಚಿವರು ಶನಿವಾರ ತಿಳಿಸಿದ್ದಾರೆ.
ಖೈಬರ್ ಪಖ್ತೂನ್ಖ್ವಾ ಪ್ರಾಂತದಲ್ಲಿ ಭದ್ರತಾಪಡೆಗಳ ಮೇಲೆ ಗರಿಷ್ಠ ಸಂಖ್ಯೆಯ ಭಯೋತ್ಪಾದಕ ದಾಳಿಗಳು ವರದಿಯಾಗಿವೆ. ಆ ಪ್ರಾಂತದಲ್ಲಿ ಹಾಲಿ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಭದ್ರತಾಪಡೆಗಳ ಮೇಲೆ 247 ದಾಳಿಗಳು ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿಸ್ತಾನದಲ್ಲಿ ಭಯೋತ್ಪಾದಕ ದಾಳಿಯ 171 ಘಟನೆಗಳು, 12 ದಾಳಿಗಳು ಸಿಂಧ್ ಪ್ರಾಂತದಲ್ಲಿ ವರದಿಯಾಗಿವೆ. ಈ ಆರು ತಿಂಗಳುಗಳಲ್ಲಿ ಪಂಜಾಬ್ನಲ್ಲಿ ಅತ್ಯಂತ ಕನಿಷ್ಠ ಅಂದರೆ ಕೇವಲ ಒಂದು ದಾಳಿಯ ಘಟನೆ ನಡೆದಿದೆ. ರಾಜಧಾನಿ ಇಸ್ಲಾಮಾಬಾದ್ನಲ್ಲಿ 3 ಭಯೋತ್ಪಾದಕ ದಾಳಿಗಳು ನಡೆದಿವೆ.
ಈ ಭಯೋತ್ಪಾದಕ ದಾಳಿಗಳಿಂದಾಗಿ ಭದ್ರತಾಪಡೆಗಳ 323 ಸೈನಿಕರು ಸಾವನ್ನಪ್ಪಿದ್ದಾರೆ. ಈ ಮಧ್ಯೆ ಭದ್ರತಾಪಡೆಗಳು ಹಾಗೂ ಇತರ ಸಂಘಟನೆಗಳ 718 ಸೈನಿಕರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಸಂಧಾನಕಾರರ ಜೊತೆ ಶಾಂತಿ ಮಾತುಕತೆಗಳನ್ನು ನಡೆಸುವ ಬಗ್ಗೆ ಮೃದು ಧೋರಣೆ ತಾಳುವಂತೆ ನಿಷೇಧಿತ ತೆಹ್ರಿಕೆ ತಾಲಿಬಾನ್ (ಟಿಟಿಪಿ) ಗುಂಪಿನ ಮನವೊಲಿಸುವ ಪ್ರಯತ್ನ ವಿಫಲವಾಗಿದೆಯೆಂದು ಪಾಕಿಸ್ತಾನಿ ಉಲೇಮಾಗಳ ನಿಯೋಗವು ಹೇಳಿರುವುದಾಗಿ ವರದಿಯಾಗಿದೆ.
ಟಿಟಿಪಿ ಜೊತೆ ಮಾತುಕತೆಗಾಗಿ ಶೇಖುಲ್ ಇಸ್ಲಾಂ ಮುಫ್ತಿ ತಕಿ ಉಸ್ಮಾನಿ ನೇತೃತ್ವದ ನಿಯೋಗವು ಸೋಮವಾರ ಸಿ-130 ವಿಮಾನದಲ್ಲಿ ಕಾಬೂಲ್ಗೆ ತೆರಳಿದ್ದು, ಬುಧವಾರದವರೆಗೆ ಅಲ್ಲಿ ವಾಸ್ತವ್ಯಹೂಡಿತ್ತು. ಆದರೆ ಟಿಟಿಪಿ ನಾಯಕರು ಮಾತುಕತೆಯಲ್ಲಿ ಪಾಲ್ಗೊಂಡಾದರೂ, ಪಾಕಿಸ್ತಾನದ ಉಲೇಮಾಗಳ ಬೇಡಿಕೆಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆಂದು ವರದಿಯಾಗಿದೆ.







