ಒಂದೇ ಧರ್ಮದೊಳಗೆ ಆರಾಧನಾ ಸ್ಥಳಗಳ ಕಾಯ್ದೆಯ ಜಾರಿ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಜು.30: ಒಂದೇ ಧರ್ಮದ ಎರಡು ಪಂಥಗಳ ನಡುವಿನ ಕದನದಲ್ಲಿ 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯವು,ಜೈನ ಸಮುದಾಯದ ಒಂದು ಪಂಥವು ತನ್ನ ಧಾರ್ಮಿಕ ಸ್ಥಳಗಳನ್ನು ಪರಿವರ್ತಿಸುತ್ತಿದೆ ಎಂದು ಆರೋಪಿಸಿ ಇನ್ನೊಂದು ಪಂಥವು ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಲು ನಿರಾಕರಿಸಿದೆ.
ಒಂದು ಧರ್ಮದ ಆರಾಧನಾ ಸ್ಥಳವನ್ನು ಬೇರೊಂದು ಧಾರ್ಮಿಕ ಪಂಗಡದ ಆರಾಧನಾ ಸ್ಥಳವನ್ನಾಗಿ ಪರಿವರ್ತಿಸುವುದರ ವಿರುದ್ಧ ರಕ್ಷಣೆ ನೀಡುವುದು 1991ರ ಕಾಯ್ದೆಯ ಉದ್ದೇಶವಾಗಿದೆ ಎಂದು ಸ್ಪಷ್ಟ ಪಡಿಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಜೆ.ಬಿ.ಪರ್ಡಿವಾಲಾ ಅವರ ಪೀಠವು,ಆದರೆ ಇದು ಎರಡು ಧರ್ಮಗಳ ನಡುವಿನ ವಿವಾದವಲ್ಲ. ನಿಮ್ಮ ಪ್ರಕರಣವು ಒಂದೇ ಧರ್ಮದ ಇನ್ನೊಂದು ಪಂಥದ ವಿರುದ್ಧವಾಗಿದೆ. ಇದನ್ನು ಮೂಲಭೂತ ಹಕ್ಕುಗಳ ಜಾರಿಗಾಗಿ ಸಂವಿಧಾನದ 32ನೇ ವಿಧಿಯಡಿ ರಿಟ್ ಅರ್ಜಿಯನ್ನಾಗಿ ನಾವು ಅಂಗೀಕರಿಸಲು ಹೇಗೆ ಸಾಧ್ಯ? ಇದು ಪರಿವರ್ತನೆಯ ಪ್ರಕರಣವೇ ಅಲ್ಲ. ನೀವು ಸಿವಿಲ್ ದಾವೆಯನ್ನು ಹೂಡಬೇಕು ಮತ್ತು ಅಲ್ಲಿ ಪರಿಹಾರವನ್ನು ಕೋರಬೇಕು ಎಂದು ಅರ್ಜಿದಾರರಾದ ಜೈನ ಸಮುದಾಯದ ಶ್ವೇತಾಂಬರ ಮೂರ್ತಿ ಪೂಜಕ ತಪ್ಗಚ್ಛಾ ಸಮುದಾಯದ ಪರ ವಕೀಲರಾದ ಅರವಿಂದ ದಾತಾರ್ ಅವರಿಗೆ ತಿಳಿಸಿತು.
ಉಭಯ ಪಂಥಗಳು ವಿವಾದದ ಕೇಂದ್ರವಾಗಿರುವ ಸಾಮಾನ್ಯ ದೇವಸ್ಥಾನಗಳನ್ನು ಹಂಚಿಕೊಂಡಿವೆ ಮತ್ತು ಬಹುಸಂಖ್ಯಾಕ ಪಂಥವು ತನ್ನ ನಂಬಿಕೆಗಳನ್ನು ಅಲ್ಪಸಂಖ್ಯಾಕ ಪಂಥದ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ತಮ್ಮ ಧಾರ್ಮಿಕ ಆಚರಣೆಗಳಿಗಾಗಿ,ವಿಶೇಷವಾಗಿ ತಮ್ಮ ಜೀವಂತ ಸನ್ಯಾಸಿಗಳಿಗೆ ಗೌರವಗಳನ್ನು ಸಲ್ಲಿಸಲು ತಾವು ದೇವಸ್ಥಾನಗಳನ್ನು ಪ್ರವೇಶಿಸುವುದನ್ನು ಇನ್ನೊಂದು ಪಂಥವು ತಡೆಯುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.





