ಕಾಮನ್‌ವೆಲ್ತ್ ಗೇಮ್ಸ್: ಮೀರಾಬಾಯಿ ಚಾನುವಿಗೆ ಚಿನ್ನ

ಬರ್ಮಿಂಗ್‌ಹ್ಯಾಮ್, ಜು.30: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹಿರಿಯ ವೇಟ್‌ಲಿಫ್ಟರ್ ಮೀರಾ ಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಮೀರಾಬಾಯಿ ಚಾನು ಶನಿವಾರ ನಡೆದ ಮಹಿಳೆಯರ 49 ಕೆಜಿ ವಿಭಾಗದ ಫೈನಲ್‌ನಲ್ಲಿ ಒಟ್ಟು 201 ಕೆಜಿ (113+88)ಎತ್ತಿ ಹಿಡಿದು ಗೇಮ್ಸ್ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಪದಕ ಗೆದ್ದ ಸಾಧನೆ ಮಾಡಿದರು.
ಮೀರಾಬಾಯಿ 2014ರಲ್ಲಿ ಗ್ಲಾಸ್ಗೊ ಗೇಮ್ಸ್‌ನಲ್ಲಿ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಹಾಗೂ 2018ರ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ಇದಕ್ಕೂ ಮೊದಲು ವೇಟ್‌ಲಿಫ್ಟರ್ ಸಂಕೇತ್ ಸರ್ಗರ್ ಪುರುಷರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಜಯಿಸುವುದರೊಂದಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಖಾತೆ ತೆರೆದಿದ್ದರು. ಕನ್ನಡಿಗ ಗುರುರಾಜ ಪೂಜಾರಿ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಟ್ಟರು. ಈ ಮೂಲಕ ಭಾರತವು ಒಂದೇ ದಿನ ವೇಟ್‌ಲಿಫ್ಟಿಂಗ್‌ನಲ್ಲಿ ಮೂರು ಪದಕಗಳನ್ನು ಜಯಿಸಿತು.





