500 ಪುಸ್ತಕ ಸರಕಾರವೇ ಖರೀದಿಸಲಿ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

ಬೆಂಗಳೂರು, ಜು.30: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪ್ರತಿ ವಾರ್ಷಿಕ ಸಾಲಿನಲ್ಲಿ 500 ಪುಸ್ತಕಗಳನ್ನು ಸರಕಾರವೇ ಖರೀದಿ ಮಾಡಬೇಕೆಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಒತ್ತಾಯಿಸಿದರು.
ಶನಿವಾರ ನಗರದ ಗಾಂಧಿಭವನ ಸಭಾಂಗಣದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ವತಿಯಿಂದ ಏರ್ಪಡಿಸಿದ್ದ ಕೃತಿಗಳ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರವೇ ಉದಯೋನ್ಮುಖ ಲೇಖಕರೂ ಬೆಳಕಿಗೆ ಬರುವಂತಾಯಿತು. ಇದರ ನಡುವೆ ನಮ್ಮ ಬೇಡಿಕೆಗಳ ಬಗ್ಗೆ ಸರಕಾರದ ಮೇಲೆ ಒತ್ತಡ ತರಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಬೇಕು. ಪ್ರಮುಖವಾಗಿ ಪ್ರತಿವರ್ಷ 15 ಕೋಟಿ ರೂ.ಗಳ ಅನುದಾನ ಮೀಸಲಿಡುವ ಜೊತೆಗೆ 500 ಪುಸ್ತಕಗಳನ್ನು ಸರಕಾರದಿಂದಲೇ ಖರೀದಿಸುವಂತೆ ಒತ್ತಾಯಿಸಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಪ್ರತಿ ವರ್ಷ ನೀಡುವ 15 ಕೋಟಿ ರೂ.ಗಳ ಅನುದಾನದಲ್ಲಿ ಇನ್ನೂ 10 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದರಿಂದ ಪ್ರಕಟಣೆಗೆ ಸಜ್ಜಾಗಿರುವ ಎಷ್ಟೋ ಪುಸ್ತಕಗಳು ಮೂಲೆ ಸೇರುತ್ತಿವೆ. ಕಾಗದದ ಬೆಲೆ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಪುಸ್ತಕ ಪ್ರಕಟಣೆಗೂ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಲೇಖಕರು, ಪ್ರಕಾಶಕರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದ ಅವರು, ಲೇಖಕರ ಸೃಜನಶೀಲ ಚಿಂತನೆಗಳಿಗೆ ಸಮಾಜ ಬೆಂಬಲಿಸಬೇಕು. ಪ್ರಮುಖವಾಗಿ ಆರ್ಥಿಕವಾಗಿ ಬಲಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಲೋಕಾರ್ಪಣೆ: ಕಾರ್ಯಕ್ರಮದಲ್ಲಿ ಡಿ.ಕೆ.ಮಂಜುಳಾ ಅವರ `ಮುಕ್ತೆ’, ಕಂವೀ ಅವರ `ರಾಯಲ ಸೀಮಾ ಕಥೆಗಳು’, ಬಿ.ಓಬಯ್ಯ ಅವರ `ಬಯಕೆಯ ಬೆನ್ನೇರಿ’, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅವರ `ತೌಲನಿಕ ಸಾಹಿತ್ಯ ಮೀಮಾಂಸೆ’, ಕೇಶವ ರೆಡ್ಡಿ ಹಂದ್ರಾಳರ `ಬೆರಕೆ ಸೊಪ್ಪು’ ಹಾಗೂ ಹೃದಯಶಿವ ಅವರ `ಕ್ಲ್ಯಾಪ್‍ಬೋರ್ಡ್’ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೊಡೇ ಪಿ.ಕೃಷ್ಣ, ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕಾರ್ಯದರ್ಶಿ ಆರ್.ದೊಡ್ಡೆಗೌಡ, ಹಿರಿಯ ಪತ್ರಕರ್ತ ರವೀಂದ್ರ ಭಟ್ ಸೇರಿದಂತೆ ಪ್ರಮುಖರಿದ್ದರು.







