ಪತ್ರಕರ್ತರೆಂದರೆ ಜಾಹೀರಾತು ಏಜೆನ್ಸಿಯಲ್ಲ: ಹಿರಿಯ ಪತ್ರಕರ್ತ ನಾಗೇಶ ಹೆಗಡೆ

ಬೆಂಗಳೂರು, ಜು. 30: ‘ಪತ್ರಕರ್ತರು ಕೇವಲ ಜಾಹೀರಾತು ಏಜೆನ್ಸಿಯಾಗಿ ಕೆಲಸ ಮಾಡುವ ಒತ್ತಡಕ್ಕೆ ಒಳಗಾಗದೆ ಸ್ವತಂತ್ರ ಆಲೋಚನೆಯಿಂದ ಕೆಲಸ ಮಾಡುವ ಸ್ಥಿತಿ ಬರಬೇಕು' ಎಂದು ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬದುಕು-ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಸಂಸ್ಥೆಯು ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಬೆಂಗಳೂರು ಪ್ರೆಸ್‍ಕ್ಲಬ್ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘದ ಸಹಯೋದಗಲ್ಲಿ ಪ್ರೆಸ್‍ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ‘ಜರ್ನಲಿಸ್ಟ್‍ಗಳಿಗಾಗಿ ಪರ್ಯಾಯ ಜೀವನೋಪಾಯ ಸಾಧ್ಯತೆಗಳು’ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಾಧ್ಯಮಗಳು ಸ್ವತಂತ್ರ ಹಾಗೂ ನಿರ್ಭೀತವಾಗಿ ಕೆಲಸ ಮಾಡಿದ್ದರಿಂದ ಇಂಗ್ಲೆಂಡ್ ಪ್ರಧಾನಿ ರಾಜೀನಾಮೆ ನೀಡಿದರು. ಈಗ ಅಲ್ಲಿ ಭಾರತೀಯ ಹಿನ್ನಲೆಯ ವ್ಯಕ್ತಿ ಪ್ರಧಾನಿಯಾಗುವ ಸನಿಹದಲ್ಲಿ ಇದ್ದಾರೆ. ಆದರೆ, ಭಾರತದಲ್ಲಿ ಮಾಧ್ಯಮ ಜಗತ್ತುನಿರ್ಭೀತಿಯಿಂದ ಕಾರ್ಯನಿರ್ವಹಿಸುವ ವಾತಾವರಣ ಕಡಿಮೆಯಾಗುತ್ತಿದೆ’ ಎಂದು ನಾಗೇಶ್ ಹೆಗಡೆ ಕಳವಳ ವ್ಯಕ್ತಪಡಿಸಿದರು.
‘ತಂತ್ರಜ್ಞಾನದ ಬೆಳವಣಿಗೆಯಿಂದ ಮಾಧ್ಯಮ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ಸಕಾರಾತ್ಮಕವಾಗಿ ಬಳಸಿಕೊಂಡರೆ ಗ್ರಾಮೀಣ ಪತ್ರಿಕೋದ್ಯಮ ಪರಿಣಾಮಕಾರಿ ಸಾಮಾಜಿಕ ಬದಲಾವಣೆಗೆ ಕೆಲಸ ಮಾಡಲು ಸಾಧ್ಯವಿದೆ. ಬುಂದೇಲ್‍ಖಂಡದ ಕಬರ್ ಲಹರಿಯಾ ತಂಡ ಇದಕ್ಕೆ ಒಂದು ಉತ್ತಮ ಉದಾಹರಣೆ. ಈಗ ಅತ್ಯಂತ ಸುಲಭವಾಗಿ ಡಿಜಿಟಲ್ ಮಾಧ್ಯಮವನ್ನು ರೂಪಿಸಲು ಸಾಧ್ಯವಿರುವುದರಿಂದ ಇದುವರೆಗೂ ಮಾಧ್ಯಮದಲ್ಲಿ ಬರದೇ ಇರುವ ವಿಷಯಗಳನ್ನು ಜನರಿಗೆ ತಲುಪಿಸುವ ಸಾಧ್ಯತೆ ಇಂದು ಹಿಂದೆದಿಗಿಂತ ಹೆಚ್ಚಾಗಿದೆ’ ಎಂದು ಅವರು ತಿಳಿಸಿದರು.
ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ‘ಪ್ರಸ್ತುತ ಸಂದರ್ಭದಲ್ಲಿ ಪತ್ರಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಡಿಜಿಟಲ್ ಜಗತ್ತಿನ ಅವಕಾಶಗಳನ್ನು ಪತ್ರಕರ್ತರು ಪರ್ಯಾರ ಜೀವನೋಪಾಯಕ್ಕೆ ಪೂರಕವಾಗಿ ಬಳಸಿಕೊಳ್ಳಲು ವಿಫುಲ ಅವಕಾಶಗಳಿವೆ. ಹೊಸ ಸಾಧ್ಯತೆಗಳ ಕಡೆಗೆ ಪತ್ರಕರ್ತರು ಮುಕ್ತವಾಗಿ ತೆರೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಾಘವೇಂದ್ರ ಕೆ.ತೊಗರ್ಸಿ, ಖಜಾಂಚಿ ಮುಂಜಾನೆ ಸತ್ಯ, ಪತ್ರಕರ್ತೆಯರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತಿ ಭಟ್, ಪ್ರೆಸ್‍ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್, ಖಜಾಂಚಿ ಮೋಹನ್ ಕುಮಾರ್, ಬದುಕು-ಸೆಂಟರ್ ಫಾರ್ ಲೈವ್ಲಿಹುಡ್ಸ್ ಲನಿರ್ಂಗ್‍ನ ಸಮೂಹ ಮಾಧ್ಯಮ ಕೋರ್ಸ್ ಕನ್ವೀನರ್ ಮುರಳಿ ಮೋಹನ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.







