ಫಾಝಿಲ್ ಕೊಲೆ ಪ್ರಕರಣ: ದುಷ್ಕರ್ಮಿಗಳು ಬಳಸಿದ್ದ ಕಾರು, ಮತ್ತದರ ಮಾಲಕ ಪೊಲೀಸ್ ವಶಕ್ಕೆ?

ಮುಹಮ್ಮದ್ ಫಾಝಿಲ್
ಸುರತ್ಕಲ್, ಜು.31: ಇಲ್ಲಿನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝಿಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಂತಕರು ಬಳಸಿದ್ದೆನ್ನಲಾದ ಕಾರು ಮತ್ತು ಅದರ ಮಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆ ಕೃತ್ಯದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರ ತಂಡ ಸುಮಾರು ಐದು ಕಾರುಗಳನ್ನು ವಶಕ್ಕೆ ಪಡೆದು ಆ ನಿಟ್ಟಿನಲ್ಲಿ ವಿಚಾರಣೆ ಆರಂಭಿಸಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಗಳಲ್ಲಿ ಹಂತಕರು ಸಂಚರಿಸಿದ್ದ ಕಾರಿನ ನೋಂದಣಿ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅದರ ಆಧಾರದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಐದು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ಪೈಕಿ ಒಂದು ಕಾರಿನ ಮಾಲಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ಬಂಧಿಸಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಪೊಲೀಸ್ ಇಲಾಖೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಗುರುವಾರ ರಾತ್ರಿ ಮುಹಮ್ಮದ್ ಫಾಝಿಲ್ ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಭೇಟಿ ಮಾಡಿ ಅಂಗಡಿಯಿಂದ ಹೊರಬರುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಅವರನ್ನು ಕೊಲೆಗೈದಿದ್ದಾರೆ.