ಫಾಝಿಲ್ ಕೊಲೆ ಪ್ರಕರಣ | ಆರೋಪಿಗಳು ಬಳಸಿದ್ದ ಕಾರಿನ ಮಾಲಕ ವಶಕ್ಕೆ: ಪೊಲೀಸ್ ಆಯುಕ್ತ ಶಶಿಕುಮಾರ್
ಮಂಗಳೂರು, ಜು.31: ಸುರತ್ಕಲ್ ನಲ್ಲಿ ಗುರುವಾರ (ಜು.28) ರಾತ್ರಿ ನಡೆದ ಮುಹಮ್ಮದ್ ಫಾಝಿಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಬಳಸಿದ್ದ ಕಾರಿನ ಮಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಮಾಧ್ಯಮದವರಿಗೆ ರವಿವಾರ ಮಾಹಿತಿ ನೀಡಿದ ಅವರು, ಕೊಲೆ ನಡೆದ ಪರಿಸರದ ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳ ಆಧಾರದಲ್ಲಿ 8 ಬಿಳಿ ಬಣ್ಣದ ಇಯೋನ್ ಕಾರುಗಳನ್ನು ವಶಕ್ಕೆ ಪಡೆದು ಅದರ ಮಾಲಕರನ್ನು ವಿಚಾರಣೆ ನಡೆಸಿದ್ದೇವೆ. ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯಲ್ಲಿ ಕಂಡುಬಂದ ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ಆರೋಪಿಗಳು ಬಳಸಿದ ಕಾರಿನ ಮಾಲಕನನ್ನು ಸುರತ್ಕಲ್ ಹೊರ ವಲಯದಲ್ಲಿ ಶನಿವಾರ ಸಂಜೆ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.
ವಶಕ್ಕೆ ಪಡೆದ ವ್ಯಕ್ತಿ ವಿಚಾರಣೆಯ ವೇಳೆ ನೀಡಿರುವ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿದಿದೆ. ಆತನಲ್ಲಿ ಇನ್ನೂ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗುವುದು. ಇದರಿಂದ ಕೊಲೆ ಆರೋಪಿಗಳ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆಯಲಾಗುವುದು. ಈಗಾಗಲೇ ಆತ ನೀಡಿರುವ ಮಾಹಿತಿಯನ್ನು ಆಧರಿಸಿ ಕೊಲೆ ಆರೋಪಿಗಳ ಬಂಧಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.