ಭೂ ಹಗರಣ ಪ್ರಕರಣ: ಶಿವಸೇನೆ ನಾಯಕ ಸಂಜಯ್ ರಾವತ್ ರನ್ನು ಬಂಧಿಸಿದ ಇಡಿ
ಮುಂಬೈ,ಜು.31: ಶಿವಸೇನೆ ಸಂಸದ ಸಂಜಯ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಡಿಜಿಸಿಎ)ದ ಅಧಿಕಾರಿಗಳು ರವಿವಾರ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಳ್ಳಂಬೆಳಿಗ್ಗೆ ರಾವುತ್ ನಿವಾಸದ ಮೇಲೆ ದಾಳಿ ನಡೆಸಿ ಶೋಧ ಕಾಯಾಚರಣೆ ಕೈಗೊಂಡಿದ್ದ ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗುವಂತೆ ಈ.ಡಿ.ಎರಡು ಸಲ ಸಮನ್ಸ್ ಜಾರಿಗೊಳಿಸಿದ್ದರೂ ರಾವುತ್ ಅದನ್ನು ಕಡೆಗಣಿಸಿದ್ದರು.
ಬೆಳಿಗ್ಗೆ ಏಳು ಗಂಟೆಯ ಸುಮಾರಿಗೆ ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಉಪನಗರಿ ಭಾಂಡುಪ್‌ನಲ್ಲಿರುವ ರಾವುತ್ ನಿವಾಸವನ್ನು ತಲುಪಿದ್ದ ಈ.ಡಿ.ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು.
ಮುಂಬೈನ ಪತ್ರಾ ಚಾಳ್ ನ ಪುನರ್ಅಭಿವೃದ್ಧಿಗೆ ಸಂಬಂಧಿಸಿದಂತೆ ಮತ್ತು ರಾವುತ್ ಪತ್ನಿ ಹಾಗೂ ಅವರ ನಿಕಟ ಸಹವರ್ತಿಗಳನ್ನೊಳಗೊಂಡ ಸಂಬಂಧಿತ ವಹಿವಾಟುಗಳ ಬಗ್ಗೆ ಶಿವಸೇನೆ ನಾಯಕನನ್ನು ವಿಚಾರಣೆಗೊಳಪಡಿಸಲು ಈ.ಡಿ.ಬಯಸಿದೆ. ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಪ್ರಮುಖರಾಗಿರುವ ರಾವುತ್ ತಾನು ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸಿದ್ದಾರೆ. ರಾಜಕೀಯ ಪ್ರತೀಕಾರಕ್ಕಾಗಿ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
‘ಇದೊಂದು ಸುಳ್ಳು ಕ್ರಮ,ಸಾಕ್ಷವೂ ಸುಳ್ಳು. ನಾನು ಶಿವಸೇನೆಯನ್ನು ತೊರೆಯುವುದಿಲ್ಲ. ನಾನು ಸತ್ತರೂ ಶರಣಾಗುವುದಿಲ್ಲ. ಯಾವುದೇ ಹಗರಣದೊಂದಿಗೆ ನನಗೆ ಸಂಬಂಧವಿಲ್ಲ. ಶಿವಸೇನೆ ವರಿಷ್ಠ ಬಾಳಾಸಾಹೇಬ ಠಾಕ್ರೆಯವರ ಮೇಲೆ ಆಣೆಯಿಟ್ಟು ನಾನು ಈ ಮಾತನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬ್ ನಮಗೆ ಹೋರಾಡಲು ಕಲಿಸಿದ್ದಾರೆ. ಶಿವಸೇನೆಗಾಗಿ ಹೋರಾಟವನ್ನು ನಾನು ಮುಂದುವರಿಸುತ್ತೇನೆ ’ಎಂದು ಈ.ಡಿ.ಅಧಿಕಾರಿಗಳು ತನ್ನ ನಿವಾಸಕ್ಕೆ ಭೇಟಿ ನೀಡಿದ ಬೆನ್ನಿಗೇ ರಾವುತ್ ಟ್ವೀಟಿಸಿದ್ದರು.
ಸಮನ್ಸ್ ತಪ್ಪಿಸಿಕೊಂಡಿದ್ದಕ್ಕೆ ಬಿಜೆಪಿ ರಾವುತ್‌ಗೆ ತಿರುಗೇಟು ನೀಡಿದೆ. ರಾವುತ್ ಅಮಾಯಕರಾಗಿದ್ದರೆ ಅವರಿಗೇಕೆ ಈ.ಡಿ.ಯ ಬಗ್ಗೆ ಭಯ? ಅವರಿಗೆ ಸುದ್ದಿಗೋಷ್ಠಿಯನ್ನು ನಡೆಸಲು ಬೇಕಾದಷ್ಟು ಸಮಯವಿದೆ, ಆದರೆ ವಿಚಾರಣೆಗಾಗಿ ಈ.ಡಿ.ಕಚೇರಿಗೆ ಭೇಟಿ ನೀಡಲು ಸಮಯವಿಲ್ಲ ಎಂದು ಬಿಜೆಪಿ ಶಾಸಕ ರಾಮ ಕದಂ ಕುಟುಕಿದ್ದಾರೆ. ಶೋಧ ಕಾರ್ಯಾಚರಣೆ ಸಂದರ್ಭ ರಾವುತ್ ನಿವಾಸದ ಹೊರಗೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಶಿವಸೇನೆ ಕಾರ್ಯಕರ್ತರು ಈ.ಡಿ. ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಜು.1ರಂದು ರಾವುತ್ರನ್ನು 10 ಗಂಟೆಗಳ ಕಾಲ ಪ್ರಶ್ನಿಸಿದ್ದ ಈ.ಡಿ. ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಕಲಮ್‌ಗಳಡಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಜು.20ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಸಂಸತ್ ಅಧಿವೇಶನ ನಡೆಯುತ್ತಿದೆ ಎಂಬ ಕಾರಣ ನೀಡಿ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಬಳಿಕ,ಜು.27ರಂದು ಹಾಜರಾಗುವಂತೆ ಈ.ಡಿ. ಸಮನ್ಸ್ ನೀಡಿತ್ತು. ಆದಾಗ್ಯೂ ಅವರು ಗೈರುಹಾಜರಾಗಿದ್ದರು.
ಈ.ಡಿ.ತನ್ನ ತನಿಖೆಯ ಅಂಗವಾಗಿ ಎಪ್ರಿಲ್‌ನಲ್ಲಿ ರಾವುತ್ ಪತ್ನಿ ವರ್ಷಾ ರಾವುತ್ ಮತ್ತು ಅವರ ಇಬ್ಬರು ಸಹವರ್ತಿಗಳ 11.5 ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿತ್ತು.
ವರ್ಷಾ ರಾವುತ್ ಹೆಸರಿನಲ್ಲಿ ದಾದರ್ನಲ್ಲಿರುವ ಫ್ಲಾಟ್ ಹಾಗೂ ವರ್ಷಾ ರಾವುತ್ ಮತ್ತು ಸಂಜಯ ರಾವುತ್ ಅವರ ನಿಕಟವರ್ತಿ ಸುಜಿತ ಪಾಟ್ಕರ್‌ರ ಪತ್ನಿ ಸ್ವಪ್ನಾ ಪಾಟ್ಕರ್ ಅವರ ಜಂಟಿ ಒಡೆತನದಲ್ಲಿರುವ ಅಲಿಬಾಗ್‌ನ ಕಿಹಿಮ್ ಬೀಚ್‌ನಲ್ಲಿಯ ಎಂಟು ನಿವೇಶನಗಳು ಜಫ್ತಿ ಮಾಡಿಕೊಂಡಿರುವ ಆಸ್ತಿಗಳಲ್ಲಿ ಸೇರಿವೆ.
ರಾವುತ್ ನಿಕಟವರ್ತಿಗಳಾದ ಪ್ರವೀಣ್ ರಾವುತ್ ಮತ್ತು ಸುಜಿತ್ ಪಾಟ್ಕರ್ ಜೊತೆ ಅವರ ವ್ಯವಹಾರ ಮತ್ತು ಇತರ ನಂಟುಗಳ ಬಗ್ಗೆ ಹಾಗೂ ಅವರ ಪತ್ನಿಯನ್ನೊಳಗೊಂಡ ಆಸ್ತಿ ವ್ಯವಹಾರಗಳ ಬಗ್ಗೆ ವಿವರಗಳನ್ನು ತಿಳಿದುಕೊಳ್ಳಲು ಅವರ ವಿಚಾರಣೆಯನ್ನು ಈ.ಡಿ.ಬಯಸಿದೆ.
ಗೋರೆಗಾಂವ್ ಪ್ರದೇಶದಲ್ಲಿಯ ಪತ್ರಾ ಚಾಳ್ ಪುನರ್ ಅಭಿವೃದ್ಧಿಗೆ ಸಂಬಂಧಿಸಿದ 1,034 ಕೋ.ರೂ.ಗಳ ಭೂ ಹಗರಣದ ತನ್ನ ತನಿಖೆಗೆ ಸಂಬಂಧಿಸಿದಂತೆ ಪ್ರವೀಣ್ ರಾವುತ್ರನ್ನು ಈ.ಡಿ.ಬಂಧಿಸಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಹಾರಾಷ್ಟ್ರ ವಸತಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 47 ಎಕರೆ ಜಾಗದಲ್ಲಿಯ, 672 ಬಾಡಿಗೆದಾರರು ವಾಸವಿದ್ದ ಪತ್ರಾ ಚಾಳ್‌ನ ಪುನರ್ಅಭಿವೃದ್ಧಿಯಲ್ಲಿ ಗುರು ಆಶಿಷ್ ಕನ್‌ಸ್ಟ್ರಕ್ಷನ್ ಪ್ರೈ.ಲಿ.ಭಾಗಿಯಾಗಿತ್ತು.