ಸೃಜನಶೀಲ ಲೇಖಕ ಒಳ್ಳೆಯ ವಿಮರ್ಶಕನಾಗಲಾರ: ಎಸ್.ಎಲ್. ಬೈರಪ್ಪ

ಎಸ್.ಎಲ್. ಬೈರಪ್ಪ (File Photo)
ಬೆಂಗಳೂರು, ಜು.31: ‘ಸೃಜನಶೀಲ ಲೇಖಕ ಒಳ್ಳೆಯ ವಿಮರ್ಶಕನಾಗಲಾರನು. ಒಂದುವೇಳೆ ಅವರು ಪ್ರಯತ್ನಪಟ್ಟರೆ ಅವನ ಸೃಜನಶೀಲತೆ ಹಾಳಾಗುತ್ತದೆ' ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಆಯೋಜಿಸಿದ್ದ ‘ಮಣ್ಣಿನ ಕನಸು’ ಕಾದಂಬರಿಯ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೋದಯ ಕಾಲದಲ್ಲಿ ಲೇಖಕರು ವಿಮರ್ಶಕರಾಗಿರಲಿಲ್ಲ. ನವ್ಯರು ಬಂದ ಮೇಲೆ ಲೇಖಕರು ವಿಮರ್ಶಕರಾಗುತ್ತಿದ್ದರು. ಪುಸ್ತಕ ಲೋಕಾರ್ಪಣೆಗೂ ಮೊದಲೇ ವಿಮರ್ಶಗಳನ್ನು ಬರೆಯಲು ಆರಂಭಿಸಿದರು. ಇದು ಸಾಹಿತ್ಯಕ್ಕೆ ಒಳ್ಳಯದಲ್ಲ. ಹಾಗಾಗಿ ನಾನು ವಿಮರ್ಶೆ ಮಾಡಲಿಲ್ಲ’ ಎಂದು ಹೇಳಿದರು.
‘ಮಣ್ಣಿನ ಕನಸು’ ಕಾದಂಬರಿಯನ್ನು ಬರೆದ ಶತಾವಧಾನಿ ಆರ್.ಗಣೇಶ್ಗೆ ಸಂಸ್ಕøತದಲ್ಲಿ ಹಿಡಿತವಿದೆ. ಇದರಿಂದ ಅನೂಕೂಲವೂ ಆಗಿದೆ, ಅನಾನುಕೂಲವೂ ಆಗಿದೆ. ಅವರು ಸಂಸ್ಕೃತದಲ್ಲಿರುವ ಶಬ್ದ ಹಾಗೂ ವಾಕ್ಯಗಳನ್ನು ಬಳಸಿದ್ದಾರೆ. ಹಾಗಾಗಿ ಮೊದಲ ಬಾರಿಗೆ ಕಾದಂಬರಿಯನ್ನು ಓದಿದರೆ ಅರ್ಥವಾಗುವುದು ಕಷ್ಟ. ಕನ್ನಡದ ಓದುಗರಿಗೆ ಈ ಆತಂಕ ಇತ್ತು. ಆದರೆ ಎಲ್ಲರೂ ಕಾದಂಬರಿಯನ್ನು ಒಮ್ಮತದಿಂದ ಸ್ವೀಕರಿಸಿದ್ದಾರೆ' ಎಂದರು.
ಕಾದಂಬರಿಯು ಕ್ರಿ.ಪೂ.500 ವರ್ಷದ ಹಿಂದಿನ ಚಿತ್ರಣವನ್ನು ಹೇಳುತ್ತದೆ. ಬುದ್ದರ ಹಿನ್ನಲೆ ಇಲ್ಲಿದೆ. ಇದು ಭಾರತೀಯ ಸಾಂಸ್ಕøತಿಕದಲ್ಲಿ ಒಂದು ಸಂಘರ್ಷವಾಗಿದೆ. ಬೌದ್ಧ ಮತ್ತು ಉಳಿದವರ ಸಂಘರ್ಷ ಇಲ್ಲಿದೆ ಎಂದು ಅವರು ವಿವರಿಸಿದರು.ಕಾದಂಬರಿಯೂ ಯಾವಗಲೂ ರಿಯಲಿಸ್ಟಿಕ್ ಆಗಿರುತ್ತದೆ. ಇದನ್ನು ಪ್ರೆಂಚ ಕಾದಂಬರಿಕಾರರು ಬರೆದರು. ನಂತರ ಮಾಜಿಕ್ ರಿಯಲಿಸಂ ಅನ್ನು ಬರೆಯಲು ಆರಂಭಿಸಿ, ಮೂರು ದಶಕಗಳವರೆಗೆ ಮುಂದುವರೆಸಿ ಮರಳಿ ರಿಯಲಿಸ್ಟಿಕ್ಗೆ ಹಿಂತಿರುಗಿದರು. ಸಂಸ್ಕೃತದಲ್ಲಿ ಪಾತ್ರಗಳ ವಿವರಣೆಯ ಗುಣವಿದೆ ಇದನ್ನು ಕಾದಂಬರಿಕಾರನು ಬಳಸಿಕೊಂಡಿದ್ದಾನೆ ಎಂದರು.







