ಮಂಕಿಪಾಕ್ಸ್ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ನ್ಯೂಯಾರ್ಕ್ ಸಿಟಿ

Photo Credit: AP photo
ನ್ಯೂಯಾರ್ಕ್, ಜು.31: ಅಮೆರಿಕದಲ್ಲಿ ಮಂಕಿಪಾಕ್ಸ್ ತೀವ್ರಗತಿಯಲ್ಲಿ ಉಲ್ಬಣಗೊಂಡಿರುವ ನ್ಯೂಯಾರ್ಕ್ ಸಿಟಿಯಲ್ಲಿ ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ನ್ಯೂಯಾರ್ಕ್ನ ಸುಮಾರು 1,50,000 ನಾಗರಿಕರು ಇದೀಗ ಸಾಂಕ್ರಾಮಿಕಕ್ಕೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ನಡೆದ ತುರ್ತು ಸಭೆಯ ಬಳಿಕ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆ್ಯಡಮ್ಸ್, ನ್ಯೂಯಾರ್ಕ್ ಸಿಟಿಯ ಆರೋಗ್ಯ ಮತ್ತು ಮಾನಸಿಕ ಆರೋಗ್ಯಶಾಸ್ತ್ರ ಇಲಾಖೆ ‘ಡಿಒಎಚ್ಎಂಎಚ್’ ಆಯುಕ್ತ ಅಶ್ವಿನ್ ವಾಸನ್ ಈ ಘೋಷಣೆ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ನಾವು ಲಸಿಕೆ ಮತ್ತು ಔಷಧಗಳನ್ನು ಗರಿಷ್ಟ ಜನರಿಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಕ್ಷಿಪ್ರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸೋಂಕು ಉಲ್ಬಣಗೊಳ್ಳದಂತೆ ತಡೆಯಲು ಪ್ರಯತ್ನಿಸಲಿದ್ದೇವೆ. ನಮ್ಮ ಫೆಡರಲ್ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿ ಗರಿಷ್ಟ ಪ್ರಮಾಣದಲ್ಲಿ ಲಸಿಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ತಕ್ಷಣದಿಂದ ಜಾರಿಗೆ ಬರುವ ಈ ಘೋಷಣೆಯು ನ್ಯೂಯಾರ್ಕ್ ಸಿಟಿಯ ಆರೋಗ್ಯ ನಿಯಮದಡಿ ಆಯುಕ್ತರ ತುರ್ತು ಆದೇಶಗಳನ್ನು ಹೊರಡಿಸಲು ‘ಡಿಒಎಚ್ಎಂಎಚ್ಗೆ ಅವಕಾಶ ಒದಗಿಸುತ್ತದೆ ಮತ್ತು ಆರೋಗ್ಯ ನಿಯಮದ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಮೂಲಕ ಸೋಂಕು ಹರಡಂತೆ ತಡೆಯುವ ಕ್ರಮಗಳ ಜಾರಿಗೆ ನೆರವಾಗುತ್ತದೆ. ನ್ಯೂಯಾರ್ಕ್ ಸಿಟಿ ಈಗ ಸಾಂಕ್ರಾಮಿಕ ಉಲ್ಬಣದ ಪ್ರಧಾನ ಕೇಂದ್ರವಾಗಿ ಹೊರಹೊಮ್ಮಿದ್ದು ಸುಮಾರು 1,50,000 ಜನರು ಈಗ ಸೋಂಕು ಬಾಧಿತರಾಗುವ ಅಪಾಯದಲ್ಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಕಾಏಕಿಯಾಗಿ ಉಲ್ಬಣಗೊಂಡಿರುವ ಈ ಸಾಂಕ್ರಾಮಿಕವನ್ನು ನಿರ್ಬಂಧಿಸಲು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತುರ್ತು ಕ್ರಮ ಮತ್ತು ಹೆಚ್ಚುವರಿ ಸಂಪನ್ಮೂಲದ ಅಗತ್ಯವಿದೆ. ಸಾಂಕ್ರಾಮಿಕವನ್ನು ಸಾರ್ವಜನಿಕ ಆರೋಗ್ಯ ತುರ್ತು ಎಂದು ಘೋಷಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ಸರಕಾರದ ಪ್ರತೀ ಹಂತದಲ್ಲಿನ ನಮ್ಮ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ ಅತೀ ಶೀಘ್ರದಲ್ಲಿ ಗರಿಷ್ಟ ಡೋಸ್ ಲಸಿಕೆಯನ್ನು ನ್ಯೂಯಾರ್ಕ್ ನಿವಾಸಿಗಳಿಗೆ ತಲುಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಕಿಪಾಕ್ಸ್ ಸಾಂಕ್ರಾಮಿಕ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು ಮತ್ತು ಸಾಂಕ್ರಾಮಿಕ ಹರಡದಂತೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡಿದೆ.
