ಹಿಜರಿ ವರ್ಷಾರಂಭ: ಮದ್ರಸ ಅಧ್ಯಾಪಕರು, ವಿದ್ಯಾರ್ಥಿ ನಾಯಕರಿಗೆ ವಿಶೇಷ ಅಸೆಂಬ್ಲಿ

ಉಡುಪಿ: ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ಉಡುಪಿ ರೇಂಜ್ ಇದರ ಆಶ್ರಯದಲ್ಲಿ ಹಿಜರಿ ವರ್ಷಾರಂಭದ ಪ್ರಯುಕ್ತ ಉಡುಪಿ ರೇಂಜ್ ವ್ಯಾಪ್ತಿಯ ಮದ್ರಸ ಅಧ್ಯಾಪಕರು ಹಾಗೂ ಮದ್ರಸ ವಿದ್ಯಾರ್ಥಿ ವಿಭಾಗವಾದ ಎಸ್‌ಕೆಎಸ್‌ಬಿವಿ ನಾಯಕರ ವಿಶೇಷ ಅಸೆಂಬ್ಲಿಯು ನಿಟ್ಟೆ ಮದ್ರಸ ವಠಾರದಲ್ಲಿ ರವಿವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಮಸ್ತ ಕೇರಳ ಜಂಇಯತುಲ್ ಮುಅಲ್ಲಿಮೀನ್ ತರಬೇತುದಾರ ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ಮಾತನಾಡಿ, ಮನುಷ್ಯರು ತಮ್ಮ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಸತ್ಯ ಮತ್ತು ನ್ಯಾಯದ ಸಂಸ್ಥಾಪನೆ ಹಾಗೂ ಅದನ್ನು ಎಲ್ಲೆಡೆಗೆ ವಿಸ್ತರಿಸುವುದಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕೆಂಬುವುದೇ ಹಿಜರಿಯ ಸಂದೇಶವಾಗಿದೆ ಎಂದು ಹೇಳಿದರು.
ಪ್ರಸಕ್ತ ಕಾಲದಲ್ಲಿ ನಾವು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರ ಬರಲು ನಾಗರಿಕ ವಲಯದಲ್ಲಿ ಐಕ್ಯತೆಯೆಂಬ ಗುರಿಯನ್ನು ಲಕ್ಷ್ಯವಿರಿಸಿ ಹಲವು ರೀತಿಯ ಚಿಂತನೆಗಳು, ಧೋರಣೆಗಳು, ಸಿದ್ಧಾಂತಗಳು, ನವೋತ್ಥಾನದ ವಿವಿಧೋನ್ಮುಖ ಯೋಜನೆಗಳು ಮತ್ತು ಚಂಚಲತೆಗಳಿಲ್ಲದ ನಿಲುವುಗಳನ್ನು ರೂಪಿಸಿಕೊಂಡು ಇಹಲೋಕ ಸಂಕುಚಿತತೆಯಿಂದ ಇಹಪರ ಲೋಕದ ವಿಶಾಲತೆಯೆಡೆಗೆ ಮುನ್ನುಗ್ಗಲು ನಮಗೆ ಸಾಧ್ಯವಾಗಬೇಕು ಎಂದು ಅವರು ತಿಳಿಸಿದರು.
ನಿಟ್ಟೆ ಮಸೀದಿ ಖತೀಬ್ ಫಾರೂಕ್ ಹನೀಫಿ ಅಧ್ಯಕ್ಷತೆ ವಹಿಸಿದ್ದರು. ಬೈಲೂರು ಖತೀಬ್ ನಿಝಾಮುದ್ದೀನ್ ಬಾಖವಿ, ಪಲಿಮಾರು ಖತೀಬ್ ರಿಯಾಝ್ ಫೈಝಿ ಮಲಾರ್ ಉಪಸ್ಥಿತರಿದ್ದರು. ಉಡುಪಿ ರೇಂಜ್ ಎಸ್‌ಕೆ ಜೆಎಂ ಕಾರ್ಯದರ್ಶಿ ಹಂಝ ಫೈಝಿ ಸ್ವಾಗತಿಸಿ, ವಂದಿಸಿದರು.







