ಸಮೀಪದ ಐತಿಹಾಸಿಕ ರೈಲು ನಿಲ್ದಾಣಗಳಿಗೆ ಭೇಟಿ ನೀಡುವಂತೆ ಜನತೆಗೆ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಆಗ್ರಹ

Photo credit: IANS Photo
ಹೊಸದಿಲ್ಲಿ,ಜು.31: ದೇಶದಲ್ಲಿಯ ಹಲವಾರು ರೈಲು ನಿಲ್ದಾಣಗಳು ಶ್ರೀಮಂತ ಇತಿಹಾಸವನ್ನು ಹೊಂದಿವೆ ಎಂದು ರವಿವಾರ ತನ್ನ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು,ಸ್ವಾತಂತ್ರ ಹೋರಾಟದಲ್ಲಿ ಅವುಗಳ ಮಹತ್ವವನ್ನು ತಿಳಿದುಕೊಳ್ಳಲು ತಮ್ಮ ಸಮೀಪದ ಇಂತಹ ರೈಲು ನಿಲ್ದಾಣಗಳಿಗೆ ಭೇಟಿ ನೀಡುವಂತೆ ಜನತೆಯನ್ನು ಆಗ್ರಹಿಸಿದರು.
ಭಾರತೀಯ ರೈಲ್ವೆಯು ಜು.18ರಿಂದ 23ರವರೆಗೆ ದೇಶದ ಸ್ವಾತಂತ್ರ ಹೋರಾಟದೊಂದಿಗೆ ನಂಟು ಹೊಂದಿದ್ದ,24 ರಾಜ್ಯಗಳಲ್ಲಿಯ 27 ರೈಲುಗಳು ಮತ್ತು 75 ರೈಲು ನಿಲ್ದಾಣಗಳ ಮೂಲಕ ‘ಆಝಾದಿ ಕಿ ರೇಲ್ ಗಾಡಿ’ ಸಪ್ತಾಹವನ್ನು ಆಚರಿಸಿತ್ತು. ಈ 75 ನಿಲ್ದಾಣಗಳನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು,ಸ್ಥಳೀಯ ಭಾಷೆಗಳಲ್ಲಿ ಬೀದಿ ನಾಟಕಗಳು,ಬೆಳಕು ಮತ್ತು ಧ್ವನಿ ಕಾರ್ಯಕ್ರಮಗಳು, ದೇಶಭಕ್ತಿ ಸಿನೆಮಾಗಳು ಮತ್ತು ಗೀತೆಗಳ ಪ್ರದರ್ಶನಗಳನ್ನೂ ಹಮ್ಮಿಕೊಳ್ಳಲಾಗಿತ್ತು.
‘ಈ ರೈಲು ನಿಲ್ದಾಣಗಳು ವಿಶೇಷವಾಗಿ ಅಲಂಕೃತಗೊಂಡಿವೆ ಮತ್ತು ಅವುಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ನಿಮ್ಮ ಸಮೀಪದ ಇಂತಹ ಐತಿಹಾಸಿಕ ರೈಲು ನಿಲ್ದಾಣಕ್ಕೆ ಭೇಟಿ ನೀಡಲು ನೀವು ಸಮಯಾವಕಾಶವನ್ನು ಮಾಡಿಕೊಳ್ಳಬೇಕು. ಸ್ವಾತಂತ್ರ ಆಂದೋಲನದ ಇತಿಹಾಸದ ಪುಟಗಳಿಂದ ನಿಮಗೆ ತಿಳಿದಿರದ ವಿವರಗಳನ್ನು ನೀವು ಅರಿಯುತ್ತೀರಿ. ತಮ್ಮ ಶಾಲೆಯ ಪುಟ್ಟಮಕ್ಕಳನ್ನು ಸಮೀಪದ ನಿಲ್ದಾಣಕ್ಕೆ ಕರೆದೊಯ್ದು ಇಡೀ ಘಟನಾವಳಿಗಳನ್ನು ಅವರಿಗೆ ತಿಳಿಸುವಂತೆ ನಾನು ಶಾಲಾ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಆಗ್ರಹಿಸುತ್ತೇನೆ ’ಎಂದು ಮೋದಿ ಹೇಳಿದರು.
ಈಗ ನೇತಾಜಿ ಸುಭಾಷಚಂದ್ರ ಬೋಸ್ ಜಂಕ್ಷನ್ ಗೋಮೊಹ್ ಎಂದು ಅಧಿಕೃತವಾಗಿ ನಾಮಕರಣಗೊಂಡಿರುವ ಜಾರ್ಖಂಡ್ನ ಗೋಮೊಹ್ ಜಂಕ್ಷನ್ನ್ನು ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ ಅದಕ್ಕೆ ಏಕೆ ಮರುನಾಮಕರಣ ಮಾಡಲಾಗಿದೆ ಎನ್ನುವುದನ್ನು ವಿವರಿಸಿದರು.
ನೇತಾಜಿಯವರು ಇಲ್ಲಿ ಕಾಲ್ಕಾ ಮೇಲ್ ಹತ್ತುವ ಮೂಲಕ ಬ್ರಿಟಿಷ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಲಕ್ನೋ ಸಮೀಪದ ಕಾಕೋರಿ ರೈಲು ನಿಲ್ದಾಣದ ಹೆಸರನ್ನು ನೀವು ಕೇಳಿರಲೇಬೇಕು. ರಾಮಪ್ರಸಾದ ಬಿಸ್ಮಿಲ್ ಮತ್ತು ಅಷ್ಫಕುಲ್ಲಾ ಖಾನ್ ಅವರಂತಹ ಧೈರ್ಯಶಾಲಿಗಳ ಹೆಸರುಗಳು ಈ ನಿಲ್ದಾಣದೊಂದಿಗೆ ಗುರುತಿಸಿಕೊಂಡಿವೆ. ಕೆಚ್ಚೆದೆಯ ಕ್ರಾಂತಿಕಾರಿಗಳು ರೈಲಿನ ಮೂಲಕ ಸಾಗಿಸಲಾಗುತ್ತಿದ್ದ ಬ್ರಿಟಿಷರ ಖಜಾನೆಯನ್ನು ದೋಚುವ ಮೂಲಕ ಬ್ರಿಟಿಷರಿಗೆ ತಮ್ಮ ತಾಕತ್ತನ್ನು ಪ್ರದರ್ಶಿಸಿದ್ದರು. ತಮಿಳುನಾಡಿನ ಜನರೊಂದಿಗೆ ನೀವು ಮಾತನಾಡಿದಾಗ ನಿಮಗೆ ತೂತ್ತುಕುಡಿ ಜಿಲ್ಲೆಯ ವಂಚಿ ಮಣಿಯಾಚ್ಚಿ ಜಂಕ್ಷನ್ ಬಗ್ಗೆ ಗೊತ್ತಾಗುತ್ತದೆ. ಈ ನಿಲ್ದಾಣಕ್ಕೆ ತಮಿಳು ಸ್ವಾತಂತ್ರ ಹೋರಾಟಗಾರ ವಂಚಿನಾಥನ್ಜಿ ಅವರ ಹೆಸರನ್ನು ಇಡಲಾಗಿದೆ. ಅಲ್ಲಿಯೇ ಆಗ 25ರ ಹರೆಯದವರಾಗಿದ್ದ ಅವರು ಬ್ರಿಟಿಷ್ ಜಿಲ್ಲಾಧಿಕಾರಿಯೋರ್ವನನ್ನು ಆತನ ಕೃತ್ಯಕ್ಕಾಗಿ ಶಿಕ್ಷಿಸಿದ್ದರು ಎಂದು ಮೋದಿ ಹೇಳಿದರು.
ಭಾರತೀಯ ರೈಲ್ವೆಯಿಂದ ಸಂಭ್ರಮಾಚರಣೆ ಸಂದರ್ಭದಲ್ಲಿ ಗುರುತಿಸಲಾಗಿದ್ದ 27 ರೈಲುಗಳು ಮಹಾತ್ಮಾ ಗಾಂಧಿ,ತನ್ನ ಗೀತೆಗಳಿಂದ ಸ್ವಾತಂತ್ರ ಹೋರಾಟಗಾರರಿಗೆ ಸ್ಫೂರ್ತಿಯನ್ನು ನೀಡಿದ್ದ ಕವಿ ರವೀಂದ್ರನಾಥ ಟಾಗೋರ್,ನೇತಾಜಿ ಸುಭಾಷಚಂದ್ರ ಬೋಸ್ ಅವರಂತಹ ಮಹಾನ್ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡಿವೆ.ಕಾರ್ಯಕ್ರಮದಲ್ಲಿ ಸ್ವಾತಂತ್ರ ಹೋರಾಟಗಾರರು ಮತ್ತು ಅವರ ಕುಟುಂಬಗಳೂ ಉಪಸ್ಥಿತರಿದ್ದರು.







