ಅತ್ಯಂತ ಕಡಿಮೆ ಅವಧಿಯಲ್ಲಿ ಕಕ್ಷೆಯ ಸುತ್ತ ತಿರುಗಿದ ಭೂಮಿ

Photo Courtesy: AFP
ನ್ಯೂಯಾರ್ಕ್, ಜು.31: ಸಾಮಾನ್ಯವಾಗಿ ತನ್ನ ಕಕ್ಷೆಯಲ್ಲಿ ಒಂದು ಸುತ್ತು ತಿರುಗಲು ಭೂಮಿಗೆ 24 ಗಂಟೆಯ ಅಗತ್ಯವಿದೆ. ಆದರೆ ಜುಲೈ 29ರಂದು 24 ಗಂಟೆಗಿಂತಲೂ 1.59 ಮಿಲಿಸೆಕೆಂಡ್ನಷ್ಟು ಕಡಿಮೆ ಅವಧಿಯಲ್ಲಿ ಈ ಕಾರ್ಯ ಪೂರೈಸುವುದರೊಂದಿಗೆ ಭೂಮಿಯು ಹೊಸ ದಾಖಲೆ ಬರೆದಿದೆ ಎಂದು ವರದಿಯಾಗಿದೆ.
2022ರ ಜುಲೈ 29 ಅತ್ಯಂತ ಕಡಿಮೆ ಅವಧಿಯ ದಿನವಾಗಿ ಗುರುತಿಸಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ಇಂಡಿಪೆಂಡೆಂಟ್’ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಪರಿಭ್ರಮಣದ ವೇಗ ಹೆಚ್ಚುತ್ತಿದೆ. 2020ರಲ್ಲಿ ಸಾಮಾನ್ಯ ಅವಧಿಗಿಂತ (ಅಂದರೆ 24 ಗಂಟೆಗಿಂತ) 1.47 ಮಿಲಿಸೆಕೆಂಡ್ ಕ್ಷಿಪ್ರವಾಗಿ ಕಕ್ಷೆಯಲ್ಲಿ ತಿರುಗಿದ್ದು ಇದುವರೆಗಿನ ದಾಖಲೆಯಾಗಿತ್ತು. ಆ ಬಳಿಕ ಭೂಮಿ ತನ್ನ ವೇಗವನ್ನು ನಿರಂತರವಾಗಿ ಹೆಚ್ಚಿಸಿ ಕೊಳ್ಳುತ್ತಾ ಬಂದಿದೆ. ಕಡಿಮೆ ಅವಧಿಯ ದಿನಗಳ 50 ವರ್ಷಗಳ ಹಂತ ಇಂದಿನಿಂದ ಪ್ರಾರಂಭವಾಗಬಹುದು ಎಂದು ‘ಇಂಟರೆಸ್ಟಿಂಗ್ ಇಂಜಿನಿಯರಿಂಗ್(ಐಇ)’ ಹೇಳಿದೆ.
ಭೂಮಿಯ ಪರಿಭ್ರಮಣದ ವೇಗದಲ್ಲಿ ಆಗಿರುವ ಬದಲಾವಣೆಗೆ ಕಾರಣ ಇನ್ನೂ ನಿಗೂಢವಾಗಿದೆ. ಆದರೆ ಸಮುದ್ರದ ಅಲೆಗಳ ಉಬ್ಬರವಿಳಿತ ಅಥವಾ ಹವಾಮಾನ ಬದಲಾವಣೆಗಳ ಒಳ ಅಥವಾ ಹೊರ ಹರಿವುಗಳು ಇದಕ್ಕೆ ಕಾರಣವಾಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಸಂಶೋಧಕರಾದ ಲಿಯೋನಿಡ್ ರೊಟೋವ್, ಕ್ರಿಶ್ಚಿಯನ್ ಬಿಝಾರ್ಡ್ ಅವರ ಪ್ರಕಾರ, ಇು ಭೂಮಿಯ ಭೌಗೋಳಿಕ ಧ್ರುವಗಳ ಚಲನೆಗೆ ಸಂಬಂಧಿಸಿದ್ದಾಗಿದೆ. ಭೂಮಿಯ ಪರಿಭ್ರಮಣದ ವೇಗ ಇದೇ ರೀತಿಯಲ್ಲಿ ಹೆಚ್ಚಿದರೆ, ಜಾಗತಿಕ ಸಮಯವನ್ನು ಸರಿದೂಗಿಸಲು ಋಣಾತ್ಮಕ ಲೀಪ್ಸೆಕೆಂಡ್(ಅಧಿಕ ಸೆಕೆಂಡ್) ಜಾರಿಗೊಳಿಸಬೇಕಾಗುತ್ತದೆ ಎಂದು ವರದಿಯಾಗಿದೆ.