ಇರಾನ್; ನೆರೆಯಿಂದ ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿಕೆ

Photo credit: AFP
ಟೆಹ್ರಾನ್, ಜು.31: ನಿರಂತರ ಸುರಿಯುತ್ತಿರುವ ಮಳೆಯಿಂದ ಇರಾನ್ನಲ್ಲಿ ಸಂಭವಿಸಿರುವ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 53ಕ್ಕೇರಿದೆ. ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದು ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
3000 ಮಂದಿಯನ್ನು ತುರ್ತು ಶಿಬಿರಕ್ಕೆ, 1,300 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ 16 ಮಂದಿ ನಾಪತ್ತೆಯಾಗಿದ್ದು ಅವರ ಪತ್ತೆ ಕಾರ್ಯ ಮುಂದುವರಿದಿದೆ. ರಕ್ಷಣೆ ಕಾರ್ಯಾಚರಣೆಗೆ 3000 ರಕ್ಷಣಾ ಕಾರ್ಯಕರ್ತರಿರುವ 687 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪರಿಹಾರ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮೆಹ್ದಿ ವಲಿಪೋರ್ರನ್ನು ಉಲ್ಲೇಖಿಸಿ ಕ್ಸಿನ್ಹುವಾ ವರದಿ ಮಾಡಿದೆ.ಈ ಮಧ್ಯೆ, ಎಲ್ಲಾ ಸಚಿವರು, ಸಂಘಟನೆಗಳ ಮುಖ್ಯಸ್ಥರು ಹಾಗೂ ಗವರ್ನರ್ ಜನರಲ್ಗಳು ತಮ್ಮ ಎಲ್ಲಾ ಮಾನವ ಸಂಪನ್ಮೂಲ ಹಾಗೂ ಇತರ ವ್ಯವಸ್ಥೆಗಳನ್ನು ಕ್ರೋಢೀಕರಿಸಿ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೂಚಿಸಿದ್ದಾರೆ.ದಕ್ಷಿಣ ಇರಾನ್ನಲ್ಲಿ ಕಳೆದ ಶನಿವಾರ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕನಿಷ್ಟ 22 ಮಂದಿ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.