ಮಂಕಿಪಾಕ್ಸ್ ರೋಗಲಕ್ಷಣವಿದ್ದ ಯುವಕನ ಮೃತ್ಯು: ಉನ್ನತ ಮಟ್ಟದ ತನಿಖೆ ಆರಂಭಿಸಿದ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್

Photo:twitter
ಪತ್ತನಂತಿಟ್ಟ: ಮಂಕಿಪಾಕ್ಸ್ನಂತಹ ರೋಗಲಕ್ಷಣಗಳನ್ನು ಹೊಂದಿದ್ದ ಯುವಕನೊಬ್ಬನ ಸಾವಿನ ಬಗ್ಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿದ್ದಾರೆ.
ಮೃತ ಯುವಕ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್ ಕುರಂಜಿಯೂರ್ ಮೂಲದವನಾಗಿದ್ದು, ಯುಎಇಯಿಂದ ವಾಪಸಾಗಿದ್ದ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ.
"ವಿದೇಶದಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶವು ಪಾಸಿಟಿವ್ ಆಗಿತ್ತು. ತೀವ್ರ ಆಯಾಸ ಹಾಗೂ ಮೆದುಳು ಜ್ವರದಿಂದಾಗಿ 26ರ ವಯಸ್ಸಿನ ವ್ಯಕ್ತಿ ತ್ರಿಶೂರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಮಂಕಿಪಾಕ್ಸ್ ಮಾರಣಾಂತಿಕ ಕಾಯಿಲೆಯಲ್ಲ" ಎಂದು ವೀಣಾ ಜಾರ್ಜ್ ಹೇಳಿದರು.
ಚಿಕಿತ್ಸೆ ನೀಡಲು ವಿಳಂಬವಾಗಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದರು.
ಯುವಕನ ಸಾವಿನ ಕುರಿತು ಆರೋಗ್ಯ ಇಲಾಖೆ ಪುನ್ನಯೂರಿನಲ್ಲಿ ಸಭೆ ಕೂಡ ಕರೆದಿದೆ.
ಇದೇ ವೇಳೆ ಮೃತ ಯುವಕನ ಸಂಪರ್ಕ ಪಟ್ಟಿ ಹಾಗೂ ಮಾರ್ಗ ನಕ್ಷೆ ಸಿದ್ಧಪಡಿಸಲಾಗಿದೆ. ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ.
ಗಮನಾರ್ಹವಾಗಿ, ಭಾರತದಲ್ಲಿ ಇದುವರೆಗೆ ಐದು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದೆ. ಅದರಲ್ಲಿ ಮೂರು ಪ್ರಕರಣಗಳು ಕೇರಳದಿಂದ, ಒಂದು ದಿಲ್ಲಿಯಿಂದ ಮತ್ತು ಇನ್ನೊಂದು ಆಂಧ್ರಪ್ರದೇಶದ ಗುಂಟೂರಿನಿಂದ ವರದಿಯಾಗಿದೆ.
ಇದರ ಬೆನ್ನಲ್ಲೇ, ಇತರ ಕೆಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರವು ಅಲರ್ಟ್ ಆಗಿದೆ.







