ಕಾಟಾಚಾರಕ್ಕೆ ಪ್ರವೀಣ್ ಹತ್ಯೆ ಪ್ರಕರಣವನ್ನು ಸರಕಾರ ಎನ್.ಐ.ಎ.ಗೆ ಒಪ್ಪಿಸಿದೆ: ಕುಮಾರಸ್ವಾಮಿ ಆರೋಪ
ಪ್ರವೀಣ್ ಮನೆಗೆ ಕುಮಾರಸ್ವಾಮಿ ಭೇಟಿ, 5 ಲಕ್ಷ ರೂ. ಪರಿಹಾರ ವಿತರಣೆ

ಸುಳ್ಯ, ಆ.1: ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಬೆಳಗ್ಗೆ ಭೇಟಿ ನೀಡಿದರು.
ಪ್ರವೀಣ್ ಅವರ ಪತ್ನಿ ನೂತನಾ ಹಾಗೂ ಅವರ ತಂದೆ ತಾಯಿಯವರಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ನಿಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ದೊರೆಯುವ ರೀತಿಯಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆರ್ಥಿಕವಾಗಿ ಅಥವಾ ಯಾವುದೇ ರೀತಿಯ ಸಂಕಷ್ಟ ಎದುರಾದರೂ ತನಗೆ ಕರೆ ಮಾಡಿ. ನಮ್ಮ ಪಕ್ಷವು ನಿಮ್ಮ ನೆರವಿಗೆ ಧಾವಿಸುತ್ತದೆ ಎಂದ ಅವರು, ಕುಟುಂಬದವರಿಗೆ ತಮ್ಮ ಮಾಬೈಲ್ ಸಂಖ್ಯೆಯನ್ನು ನೀಡಿದರು.
ಈ ವೇಳೆ ಪಕ್ಷದ ವತಿಯಿಂದ ಐದು ಲಕ್ಷ ರೂ. ಪರಿಹಾರದ ಚೆಕ್ ನ್ನು ಕುಮಾರಸ್ವಾಮಿ ವಿತರಿಸಿದರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, ಸರಕಾರವು ಕಾಟಾಚಾರಕ್ಕೆ ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್.ಐ.ಎ. ವಹಿಸಿದೆ ಎಂದು ಆರೋಪಿಸಿದರು.
ಪ್ರಕರಣವನ್ನು ಕಾಟಾಚಾರಕ್ಕೆ ತನಿಖೆ ನಡೆಸಬೇಡಿ. ಇದರಲ್ಲಿ ಸತ್ಯಾಂಶ ಏನು, ಇದರ ಹಿಂದಿರುವ ಎಂತಹ ದೊಡ್ಡ ಶಕ್ತಿಗಳೇ ಇರಲಿ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಈ ಸಂದರ್ಭ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ, ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಸುಳ್ಯ ಜೆಡಿಎಸ್ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ರಾಕೇಶ್ ಕುಂಟಿಕಾನ, ನಪಂ ಸದಸ್ಯ ಕೆ.ಎಸ್.ಉಮರ್, ರಮೀಝಾ ಬಾನು, ಹೈದರ್ ಪರ್ತಿಪ್ಪಾಡಿ, ಸುಶೀಲ್ ನೊರೋನ್ಹಾ, ಸೈಯದ್ ಮೀರಾ ಸಾಹೇಬ್ ಕಡಬ, ರತ್ನಾಕರ ಸುವರ್ಣ ಸುಮತಿ ಹೆಗ್ಡೆ, ಅಶ್ರಫ್ ಕಲ್ಲೇಗ ಮತ್ತಿತರರು ಉಪಸ್ಥಿತರಿದ್ದರು.