ಅಭಿಮಾನದ ಅಕ್ಷರಗಳಲ್ಲಿ ‘ಅರಳಿದ ಕೆಂಪು ಹೂ’

ತಳಮಟ್ಟದ ಹೋರಾಟ ಕಟ್ಟಿದ ಎಷ್ಟು ಜನರು ವಿಧಾನಸಭೆ, ಲೋಕಸಭೆ ಗಳಿಗೆ ಬರಲು ಸಾಧ್ಯವಾಗಿದೆ ಎಂಬ ಲೆಕ್ಕ ನೋಡಿದರೆ ಉಳ್ಳವರ ಹೂರಣ ಬಯಲಾಗುತ್ತದೆ.ಈಗ ಹೋರಾಟಗಳೆಂದರೆ ಉಳ್ಳವರ ನಡುವಿನ ಹೋರಾಟಗಳು ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಕಾಲಮಾನದಲ್ಲೂ ಕೊನೆಯುಸಿರಿರುವವರೆಗೂ ತತ್ವ ಸಿದ್ಧಾಂತದ ಮೇಲೆ ಗಟ್ಟಿ ಧ್ವನಿಯಿಂದ ಹೋರಾಟ ಮಾಡಿದ ಕಾಂ.ಎಚ್.ಕೆ. ರಾಮಚಂದ್ರಪ್ಪನವರು ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿ. ಹಿರಿಯ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ‘ಬೆನ್ನುಡಿ’ಯಲ್ಲಿ ವ್ಯಕ್ತಪಡಿಸಿರುವ ಅನಿಸಿಕೆಯ ತುಣುಕು ಇದು.
ಮಾಜಿ ಸಚಿವ, ಹಾಲಿ ಶಾಸಕರಾದ ಸತೀಶ್ ಜಾರಕಿಹೊಳಿಯವರ ಅಭಿಮತ ಹೀಗಿದೆ: ಎಚ್.ಕೆ.ಆರ್.ಅವರು ಮಾರ್ಕ್ಸ್ ವಾದದ ಚಿಂತನೆ ಯನ್ನು ಮೈಗೂಡಿಸಿಕೊಂಡಿದ್ದ ವಿಶಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರು. ಯಾವುದೇ ಪಕ್ಷವಾಗಿದ್ದರೂ ಅದರ ಜನವಿರೋಧಿ ಧೋರಣೆಗಳನ್ನು ವಿರೋಧಿಸುತ್ತಿದ್ದರು. ರಾಜಕಾರಣದ ಬಗ್ಗೆ ಅಪಾರವಾದ ಪ್ರಜ್ಞೆಯುಳ್ಳವರಾಗಿದ್ದರು. ಅವರ ಹೋರಾಟಗಳು ಬರೀ ಕಾರ್ಮಿಕರ ಪರವಾಗಿಯಷ್ಟೇ ಎನ್ನುವುದು ಸರಿಯಲ್ಲ. ರೈತ ಚಳವಳಿ, ಭಾಷಾ ಚಳವಳಿ, ವಿದ್ಯಾರ್ಥಿ ಚಳವಳಿ, ಮಹಿಳಾಪರ ಚಳವಳಿ, ಭೂ ಹೋರಾಟ, ಪರಿಸರ ಚಳವಳಿ,ಸಾಹಿತ್ಯ ಚಳವಳಿ ಹೀಗೆ ಈ ನೆಲದಲ್ಲಿ ನ್ಯಾಯಕ್ಕಾಗಿ ನಡೆಯುವ ಎಲ್ಲಾ ಚಳವಳಿಗಳಲ್ಲೂ ಅವರದೇ ಮುಖಂಡತ್ವ ಗಮನ ಸೆಳೆಯುವಂತಿರುತ್ತಿತ್ತು.
2021ರ ಮೇ ನಲ್ಲಿ ಕೊನೆಯುಸಿರೆಳೆದ ಕೆಂಪುಶಾಲಿನ ಕರ್ಮವೀರ ಕಾಂ. ಎಚ್.ಕೆ. ರಾಮಚಂದ್ರಪ್ಪ(79) ಕುರಿತ ಸಂಸ್ಮರಣ ಗ್ರಂಥದಲ್ಲಿ ಕೆಲ ಲೇಖನಗಳ ಪ್ರಸ್ತಾವನೆಯನ್ನು ಮೇಲ್ಕಂಡ ವಿವರಗಳೊಂದಿಗೆ ಉಲ್ಲೇಖಿಸಲಾಗಿದೆ. ಯುವ ಲೇಖಕ ಎಸ್.ಗುರುಬಸವರಾಜ (ಪಾಪುಗುರು) ಸಂಪಾದಿಸಿರುವ ‘ಕೆಂಪು ಕಾಂಡದ ಹೂ’ ಪುಸ್ತಕದಲ್ಲಿ ಎಚ್.ಕೆ.ಆರ್. ರ ಜೀವನ-ಸಾಧನೆ-ಚಟುವಟಿಕೆಗಳು ಓದುಗರ ಗಮನ ಸೆಳೆಯುತ್ತವೆ. ಬರೀ ಹೋರಾಟಗಳನ್ನೇ ಮೈಗೆ ಮೆತ್ತಿ ಕೊಂಡವರಂತೆ ಜೀವನವನ್ನು ಸವೆಯಿಸಿ ಬಹುಮಟ್ಟಿನ ಸಾರ್ಥಕ ಬದುಕನ್ನು ಎಚ್.ಕೆ.ಆರ್. ಕಂಡಿದ್ದರು. ಆದರೆ ವಿಧಿ ಅವರನ್ನು ಕೊರೋನಕ್ಕೆ ಬಲಿ ಕೊಟ್ಟಿದ್ದು ಮಾತ್ರ ಅಸಹನೀಯ ಸಂಗತಿ ಎನಿಸುತ್ತದೆ.
ಸಂಪಾದಕ ಪಾಪುಗುರು ಕೆಲ ತಿಂಗಳುಗಳ ಎಡೆಬಿಡದ ಪ್ರಯತ್ನ ದೊಂದಿಗೆ ಎಚ್.ಕೆ.ಆರ್. ಸಂಪರ್ಕಿತ ವಲಯವನ್ನು ಜಾಲಾಡಿ ಅವರವರ ಭಾವನೆಗಳನ್ನು ಅಕ್ಷರಕ್ಕಿಳಿಸುವಂತೆ ಮಾಡುವಲ್ಲಿ ಬಹುಮಟ್ಟಿನ ಸಾಫಲ್ಯವನ್ನು ಕಂಡಿದ್ದಾರೆ. ಈ ಕೆಲಸ ಸುಲಭವಾಗಿ ಕೈಗೂಡುವಂತಹುದಲ್ಲ ಎಂಬುದು ವಾಸ್ತವ ಸಂಗತಿ. ಆದರೆ ಪಾಪುಗುರು ತನ್ನೆಲ್ಲಾ ಆಸಕ್ತಿ ಮತ್ತು ಪರಿಶ್ರಮವನ್ನು ಈ ಕೃತಿ ಹೊರ ಬರಲು ಹಾಕಿದ್ದಾರೆ.
‘ಒಡನಾಟ’ವಿಭಾಗದಲ್ಲಿ ಎಪ್ಪತ್ತೊಂಬತ್ತು ಲೇಖನಗಳಿದ್ದು, ಹಿರಿ ಕಿರಿಯ ಪರಿಚಿತರು, ಒಡನಾಡಿಗಳು, ಗಣ್ಯರು, ಪೀಠಾಧಿಪತಿಗಳ ಅನಿಸಿಕೆ ಗಳು ಎಚ್.ಕೆ.ಆರ್.ವ್ಯಕ್ತಿತ್ವದ ವಿವಿಧ ಮಜಲುಗಳನ್ನು ಪರಿಚಯಿಸುತ್ತವೆ. ಇತರ ಪಕ್ಷಗಳ ಮುಖಂಡರು ಕೂಡ ಎಚ್.ಕೆ.ಆರ್. ಹೋರಾಟಮಯ ಜೀವನವನ್ನು ಶ್ಲಾಘಿಸಿರುವುದು ಗಮನಾರ್ಹ ವಿಷಯವೆನಿಸುತ್ತದೆ. ‘‘ಬಹುತೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್.ಕೆ.ಆರ್. ಹೆಸರು ಕೇಳಿದರೆ ಭಯಪಡುತ್ತಿದ್ದರು. ಕಾರಣ ಎಚ್.ಕೆ.ಆರ್.ಅಂದರೆ ಉಡಾ ಇದ್ದಂತೆ. ಪಟ್ಟು ಹಿಡಿದರೆ ಆ ಕೆಲಸ ಆಗುವವರೆಗೂ ಹಿಂದೆ ಸರಿಯುತ್ತಿರಲಿಲ್ಲ. ಅನ್ಯಾಯವಾಗುತ್ತಿದೆ ಎಂಬುದು ಅವರ ಗಮನಕ್ಕೆ ಬಂದರೆ ಸಾಕು, ತಕ್ಷಣ ಹೋರಾಟದ ರಂಗಕ್ಕಿಳಿಯುತ್ತಿದ್ದರು. ಸದಾ ಒಂದಿಲ್ಲೊಂದು ಚಟುವಟಿಕೆಗಳ ಕಾರಣಕ್ಕಾಗಿ ಸುತ್ತುತ್ತಲೇ ಇದ್ದರು.’’ ಇದು ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ ಹಂಚಿಕೊಂಡಿರುವ ಅನುಭವದ ತಿರುಳು..
‘ಸಂಘಟನೆಗಳ ಸರದಾರ’ ಲೇಖನಕ್ಕೆ ಹಿರಿಯ ಪತ್ರಕರ್ತ ವಿ. ಹನುಮಂತಪ್ಪ ಜೀವ ತುಂಬಿದ್ದಾರೆ. ‘‘ವಿಪುಲ ಸಂಖ್ಯೆಯ ಸಂಘಟನೆಯ ರೂವಾರಿಯಾಗಿದ್ದ ಎಚ್.ಕೆ.ಆರ್.ಬಹುಮಟ್ಟಿಗೆ ಎಲ್ಲಾ ಕ್ಷೇತ್ರಗಳ ಸಂಘಟನಾ ಶಕ್ತಿಯ ಪ್ರೇರಕರಾಗಿದ್ದರು. ಅತ್ಯಂತ ಸಾಹಸಮಯಿ ಹಾಗೂ ಸಂಘಟನೆಗಳ ಸೂತ್ರಧಾರನ ಕಣ್ಮರೆ ಒಂದರ್ಥದಲ್ಲಿ ತುಂಬಲಾಗದ ನಷ್ಟವೇ ಸರಿ. ಎಚ್.ಕೆ.ಆರ್. ಹೋರಾಟದ ಬಿಸುಪನ್ನು ಮುಂದುವರಿಸಲು ಯಾರಾದರೂ ಇದ್ದಾರೆಯೇ?’’ ಎಂಬ ಪ್ರಶ್ನೆಯೊಂದಿಗೆ ಈ ಲೇಖನ ಪೂರ್ಣಗೊಳ್ಳುತ್ತದೆ.
ಎಚ್.ಕೆ.ಆರ್., ಜಮಾನಾದ ಅವಧಿಯಲ್ಲೇ ರಾಜಕಾರಣದ ಪ್ರವೇಶವನ್ನು ಕಂಡ ಹಿರಿಯ ಕಾಂಗ್ರೆಸ್ ಧುರೀಣ ಎಚ್.ಆಂಜನೇಯ ಅವರ ಅನಿಸಿಕೆ ಹೀಗಿದೆ. ‘‘ಎಚ್.ಕೆ. ಆರ್. ಬಹಳ ಸೆಕ್ಯುಲರ್ ಆಗಿದ್ದರು. ಧರ್ಮಾತೀತವಾಗಿದ್ದರು. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಬಿ.ಜೆ.ಪಿ. ವಿರುದ್ಧ ಅವರದು ಸದಾ ವಿರೋಧದ ದನಿಯಾಗಿತ್ತು. ’’
ಕಿರಿಯ ಮಗ ಎಚ್.ಆರ್. ರವೀಂದ್ರನಾಥ್‌ರ ನೆನಹು ಹೀಗಿದೆ: ‘‘ನಾನು ನಮ್ಮ ತಂದೆಗೆ ಕೊನೆಯ ಮಗನಾಗಿದ್ದುದರಿಂದಲೇನೋ ಅಪ್ಪನಿಗೆ ನನ್ನ ಮೇಲೆ ತುಸು ಪ್ರೀತಿ ಜಾಸ್ತಿಯಿತ್ತು. ಅಪ್ಪಮನೆಯಲ್ಲಿ ಮಕ್ಕಳಿಗೆ ಸಮಯ ಮೀಸಲಿಟ್ಟಿದ್ದು ಕಡಿಮೆ ಎನಿಸುವ ಮನಸ್ಸಿಗೆ, ಅಪಾರ ಸಂಖ್ಯೆಯ ಜನರಿಗೆ ನನ್ನಪ್ಪದಾರಿದೀಪವಾದರಲ್ಲ ಎನ್ನುವ ಆದರ್ಶವಾದ ನನ್ನನ್ನು ಸಮಾಧಾನಿಸುತ್ತದೆ. ನನಗೆ ತಿಳಿದ ಮಟ್ಟಿಗೆ ಅಪ್ಪನ ಬಸ್ಸಿನ ಪ್ರಯಾಣವೇ ಬಹುಶಃ ಎರಡು ಲಕ್ಷ ಕಿ.ಮೀ.ಗಳಿರಬಹುದು. ಅಷ್ಟೊಂದು ಊರುಗಳನ್ನು ಸುತ್ತುತ್ತಿದ್ದ ಅಪ್ಪನಿಗೆ ದಣಿವಾಗುತ್ತಿರಲಿಲ್ಲ. ಅಪ್ಪನ ಕೊನೆಯ ಉಸಿರಿನ ತನಕವೂ ಅವರ ಜೊತೆಗಿದ್ದ ನನಗೆ ಅವರ ಕ್ರಿಯಾಶೀಲತೆ, ಸದಾ ಚಟುವಟಿಕೆ, ಪರೋಪಕಾರ ಮನೋಭಾವವನ್ನು ಅವರಷ್ಟು ತೊಡಗಿಸಿಕೊಳ್ಳುವುದು ಬಹಳ ಕಷ್ಟ.’’ ಪೂರಕ ಅಧ್ಯಾಯವು ಹದಿನೆಂಟು ಲೇಖನಗಳನ್ನು ಒಳಗೊಂಡಿದೆ. ಬರಗೂರು ರಾಮಚಂದ್ರಪ್ಪ, ರಹಮತ್ ತರೀಕೆರೆ, ರಂಜಾನ್ ದರ್ಗಾ, ಪುರುಷೋತ್ತಮ ಬಿಳಿಮಲೆಯಂತಹ ಅನುಭವಿ ಲೇಖಕರ ಸಾಂದರ್ಭಿಕ ಲೇಖನಗಳನ್ನು ಈ ಗ್ರಂಥಕ್ಕೆ ಬಳಸಿಕೊಳ್ಳಲಾಗಿದೆ. ಕವನ, ಕಮ್ಯುನಿಸ್ಟ್ ವಿಚಾರಧಾರೆಯ ಲೇಖನಗಳಿಗೂ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಸುಮಾರು ಮೂವತ್ತಕ್ಕೂ ಹೆಚ್ಚಿನ ಪುಟಗಳಲ್ಲಿ ರಾಮಚಂದ್ರಪ್ಪನವರ ಬದುಕು-ಕುಟುಂಬ ಹಾಗೂ ಚಟುವಟಿಕೆಗಳನ್ನು ದೃಶ್ಯ ಮಾಲಿಕೆ ಮೂಲಕ ಪರಿಚಯಿಸಲಾಗಿದೆ.
‘‘ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದ ರಾಮಚಂದ್ರಪ್ಪನವರಿಗೆ ವಿಧಾನಸಭೆಯ ಪ್ರಾಂಗಣದಲ್ಲೂ ಶೋಷಿತರ ಪರ ದನಿ ಹೂಂಕರಿಸುವ ಮಹತ್ವಾಕಾಂಕ್ಷೆ ಇತ್ತು ಎಂಬುದು ಉತ್ಪೇಕ್ಷೆಯ ಸಂಗತಿಯೇನಲ್ಲ. ಆದರೆ ಬದುಕಿದ್ದಷ್ಟು ಕಾಲ ಇಡೀ ಪ್ರಕೃತಿಯೇ ಪರರ ಸೇವೆಯಲ್ಲಿ ತೊಡಗಿರುವಾಗ ಮಾನವರಾಗಿ ಬೇರೆಯವರ ಒಳಿತಿಗಾಗಿ ಬದುಕ ಸವೆಸಬೇಡವೆ ಎನ್ನುವ ನಿಲುವು ಹೊಂದಿದ್ದ ಎಚ್.ಕೆ.ಆರ್. ಇಲ್ಲದ ದಾವಣಗೆರೆಯಲ್ಲಿ ಹೋರಾಟದ ಪದಕ್ಕೆ ಇನ್ನು ಮುಂದೆ ಅಷ್ಟೊಂದು ಅರ್ಥ ಸಿಗಲಾರದು’’ ಎಂದು ಸಂಪಾದಕ ತನ್ನ ಮನದಾಳದ ಅಭೀಪ್ಸೆ ಯನ್ನು ವ್ಯಕ್ತಪಡಿಸಿರುವುದು ಕೂಡ ಚಿಂತನಾರ್ಹ ಸಂಗತಿ.
ಉಷಾ ಪ್ರಕಾಶನ, ದಾವಣಗೆರೆ ಇವರಿಂದ ಪ್ರಕಾಶನವಾಗಿರುವ ಈ ಪುಸ್ತಕವು 52 ವರ್ಣ ಪುಟಗಳ ಸಹಿತ 396 ಪುಟಗಳನ್ನು ಹೊಂದಿದ್ದು, ಆಕರ್ಷಕ ಮುದ್ರಣ ಮತ್ತು ಮುಖಪುಟದೊಂದಿಗೆ ಪ್ರಕಟಗೊಂಡಿದೆ. ಪುಸ್ತಕವು ಪಿಬಿ ರಸ್ತೆಯಲ್ಲಿರುವ ನವಕರ್ನಾಟಕ ಮಾರಾಟ ಮಳಿಗೆಯಲ್ಲಿ ದೊರೆಯುತ್ತದೆ.







