ಪುತ್ತೂರು | ಜ್ಯೂಸ್ ಸೆಂಟರ್ ಗೆ ಬೆಂಕಿ: ತಪ್ಪಿದ ಅನಾಹುತ

ಪುತ್ತೂರು, ಆ.1: ನಗರದ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿರುವ ಜ್ಯೂಸ್ ಸೆಂಟರ್ ವೊಂದರಲ್ಲಿ ಸೋಮವಾರ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಮತ್ತು ಗೃಹ ರಕ್ಷಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಂಭಾವ್ಯ ಅಪಾಯ ತಪ್ಪಿದೆ.
ಪುತ್ತೂರು ಬಸ್ ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಯೋಗೀಶ್ ರೈ ಮಾಲಕತ್ವದ ಜ್ಯೂಸ್ ಸೆಂಟರ್ ನೊಳಗೆ ಮುಂಜಾಣೆ 3 ಗಂಟೆ ರಾತ್ರಿ ಸುಮಾರಿಗೆ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಇದೇವೇಳೆ ರಾತ್ರಿ ಬಸ್ ನಿಲ್ದಾಣದ ಪಾಯಿಂಟ್ ಕರ್ತವ್ಯದಲ್ಲಿದ್ದ ಪುತ್ತೂರು ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೀಮ್ ಸೇನ್ ಮತ್ತು ಗೃಹರಕ್ಷಕದಳದ ಸಿಬ್ಬಂದಿ ಸುದರ್ಶನ್ ಕಟ್ಟಡ ತುಂಬಾ ಹೊಗೆ ಆವರಿಸಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ರಾತ್ರಿ ರೌಂಡ್ಸ್ ನಲ್ಲಿದ್ದ ಎಎಸ್ಸೈ ಚಕ್ರಪಾಣಿಯವರಿಗೆ ಮಾಹಿತಿ ನೀಡಿದರು.
ಇದೇ ವೇಳೆ ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದವರು ಆಗಮಿಸಿ ಜ್ಯೂಸ್ ಸೆಂಟರ್ ಶಟರ್ ಬೀಗ ಒಡೆದು ಒಳಗೆ ಬೆಂಕಿ ಹತ್ತಿಕೊಂಡಿದ್ದ ಅಡುಗೆ ಅನಿಲವನ್ನು ಸ್ಟವ್ ನಿಂದ ಪ್ರತ್ಯೇಕಗೊಳಿಸಿ ಬೆಂಕಿಯನ್ನು ನಂದಿಸಿದರು.