ಬೆಳ್ಳಾರೆಯಲ್ಲಿ ಅತೃಪ್ತರಿಂದ ನಳಿನ್‌ಗೆ ತಡೆ, ಇದರ ಹಿಂದೆ ಷಡ್ಯಂತ್ರ: ಜಗದೀಶ ಶೇಣವ
"ಬಿಜೆಪಿಯ ನಿಜವಾದ ಕಾರ್ಯಕರ್ತರು ಹೀಗೆ ಮಾಡಿರಲಾರರು"

ಮಂಗಳೂರು, ಆ.1: ಇತ್ತೀಚೆಗೆ ಬೆಳ್ಳಾರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಕಾರನ್ನು ತಡೆದು ದಿಗ್ಬಂಧನ ಹಾಕುವ ಕೆಲಸ ಆಕಾಂಕ್ಷಿಗಳು, ಅತೃಪ್ತರು, ಅವಕಾಶ ವಂಚಿತರಿಂದ ಆಗಿದೆಯೇ ಹೊರತು ಬಿಜೆಪಿಯ ನಿಜವಾದ ಕಾರ್ಯಕರ್ತರಿಂದ ಅಲ್ಲ ಎಂದು ದ.ಕ ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ ಶೇಣವ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಯಾದ ಪ್ರವೀಣ್ ನೆಟ್ಟಾರ್ ಮನೆಗೆ ತೆರಳುವಾಗ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೇರಿದಂತೆ ಇತರೆ ಶಾಸಕರಿದ್ದರೂ ಕೇವಲ ನಳಿನ್ ಕುಮಾರ್ ಅವರನ್ನೇ ಟಾರ್ಗೆಟ್ ಮಾಡಲಾಗಿದೆ. ಇದರ ಹಿಂದೆ ಷಡ್ಯಂತ್ರವಿದೆ ಎಂದರು.
ಪ್ರವೀಣ್ ಹತ್ಯೆಯಾದ ದಿನ ನಳಿನ್ ಕುಮಾರ್ ತುರ್ತು ಕಾರ್ಯನಿಮಿತ್ತ ದಿಲ್ಲಿಗೆ ತೆರಳಿದ್ದರು. ಕೆಲಸ ಮುಗಿಸಿ ಅಲ್ಲಿಂದ ಬರುವಾಗ ತಡವಾಗಿದೆ. ಮಂಗಳೂರಿಗೆ ಬಂದ ತಕ್ಷಣ ಅವರು ಬೆಳ್ಳಾರೆಗೆ ತೆರಳಿದ್ದರು. ಅವರ ಜೊತೆಗೆ ಸುನೀಲ್ ಕುಮಾರ್ ಸೇರಿದಂತೆ ಇತರ ಜನಪ್ರತಿನಿಧಿಗಳೂ ಇದ್ದರು. ಆದರೆ ಬೆಳ್ಳಾರೆಗೆ ತೆರಳಿದಾಗ ಪರಿಸ್ಥಿತಿ ಉಲ್ಬಣಗೊಂಡಿತ್ತು. ಅಲ್ಲಿ ನಳಿನ್ ಒಬ್ಬರನ್ನೇ ಟಾರ್ಗೆಟ್ ಮಾಡಲಾಯಿತು. ಬಿಜೆಪಿಯ ನಿಜವಾದ ಕಾರ್ಯಕರ್ತರು ಹೀಗೆ ಮಾಡಿರಲಾರರು. ನಳಿನ್ ಕಳೆದ ಹಲವು ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಕಷ್ಟಕರ ಸ್ಥಿತಿಯಲ್ಲೂ ಸಂಘಟನೆ ಕಟ್ಟಲು ಶ್ರಮಿಸಿದವರು. ಇದು ಈಗಿನ ಯುವ ಕಾರ್ಯಕರ್ತರಿಗೆ ತಿಳಿದಿಲ್ಲ. ಅವರಿಗೆ ಈ ರೀತಿ ತಡೆ ಒಡ್ಡಿದ ರೀತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರರಾದ ರವಿಶಂಕರ ಮಿಜಾರು, ರಾಧಾಕೃಷ್ಣ, ಜಿಲ್ಲಾ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಸಂಯೋಜಕ ರಂದೀಪ್ ಕಾಂಚನ್ ಉಪಸ್ಥಿತರಿದ್ದರು.