ಮಾಜಿ ಸಚಿವ ಎಂ.ಬಿ.ಪಾಟೀಲ್ ನಿವಾಸದಲ್ಲಿ ಕಳವು ಪ್ರಕರಣ: ಆರೋಪಿಯ ಸೆರೆ

ಸಾಂದರ್ಭಿಕ ಚಿತ್ರ
ಬೆಂಗಳೂರು,ಆ.1: ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಮನೆಯಲ್ಲಿ ಕಳವು ಪ್ರಕರಣ ಸಂಬಂಧ ಓರ್ವನನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ಜಯಂತ್ ದಾಸ್ ಬಂಧಿತ ಆರೋಪಿಗಳಾಗಿದ್ದು, ಆತನಿಂದ ಕಳವು ಮಾಡಿದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಕಳೆದ ಐದು ವರ್ಷದಿಂದ ಎಂ.ಬಿ. ಪಾಟೀಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯು ಮಾಜಿ ಗೃಹ ಸಚಿವರ ಕುಟುಂಬದವರ ನಂಬಿಕೆ ಗಳಿಸಿದ್ದ. ಇತ್ತೀಚಿಗೆ ಎಂ.ಬಿ.ಪಾಟೀಲ್ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳೆದ ತಿಂಗಳು 85 ಲಕ್ಷ ರೂ ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಲಕ್ಷಾಂತರ ಬೆಲೆಯ 6 ಗಡಿಯಾರಗಳನ್ನು ಕದ್ದು ಒಡಿಶಾಗೆ ಪರಾರಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಮಾಹಿತಿ ತಿಳಿದ ಬಳಿಕ ಮಾಜಿ ಗೃಹ ಸಚಿವರು ಸದಾಶಿವನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ದೂರಿನನ್ವಯ ಸದಾಶಿವನಗರ ಪೊಲೀಸರು ಆರೋಪಿ ಜಯಂತ್ ಬಂಧಿಸಿ ಕರೆ ತಂದು ಪ್ರಾಥಮಿಕ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯವು ಆರೋಪಿಯನ್ನು ಐದು ದಿನ ಕಸ್ಟಡಿಗೆ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.





