ಸರಕಾರದ ತಾರತಮ್ಯ ನೀತಿ ಬಗ್ಗೆ ಕಾನೂನು ಹೋರಾಟ: ಯು.ಟಿ.ಖಾದರ್
ಕೋಮು ಗಲಭೆ ನಿಯಂತ್ರಣ ಕಾಯ್ದೆ ಸುಗ್ರೀವಾಜ್ಞೆಗೆ ಆಗ್ರಹ

ಮಂಗಳೂರು, ಆ. 1: ದ.ಕ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿದ್ದು, ಕೊಲೆಗೀಡಾದ ಯುವಕರ ತಾಯಂದಿರ ನೋವು ಒಂದೇ ಆಗಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸರಕಾರದ ಜನಪ್ರತಿನಿಧಿಗಳು ಕೇವಲ ಒಂದು ಕುಟುಂಬವನ್ನು ಭೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ನೀಡಿದ್ದು, ಸರಕಾರದ ತಾರತಮ್ಯ ನೀತಿ ಬಗ್ಗೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಮಾಡುವುದಾಗಿ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳು ಆತಂಕಕಾರಿಯಾಗಿದ್ದು, ರಾಜ್ಯ ಸರಕಾರಕ್ಕೆ ನಿಜವಾಗಿಯೂ ಕೋಮು ಸಂಘರ್ಷ ನಿಯಂತ್ರಣ ತರಬೇಕೆಂಬ ಇಚ್ಛೆಯಿದ್ದರೆ ಸುಗ್ರೀವಾಜ್ಞೆ ಮೂಲಕ ಕೋಮುಗಲಭೆ ನಿಯಂತ್ರಣ ಕಾಯಿದೆ ತರಲಿ ಎಂದು ಹೇಳಿದರು.
ರಾಜ್ಯ ಸರಕಾರ ಲವ್ ಜಿಹಾದ್, ಕೃಷಿ ಕಾಯಿದೆ ಸೇರಿದಂತೆ ನಾನಾ ಕಾಯಿದೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದೆ. ಈ ರಾಜ್ಯದಲ್ಲಿ ಪರಸ್ಪರ ಸಾಮರಸ್ಯ ಬದುಕು ಅಗತ್ಯವಾಗಿದ್ದು, ಕೋಮು ಸಂಘರ್ಷವನ್ನು ನಿಯಂತ್ರಣ ಅನಿವಾರ್ಯತೆಯಿದೆ. ಕೋಮು ಗಲಭೆಗಳ ಆರೋಪಿಗಳಿಗೆ ಸಂಬಂಧಿಸಿ ಬುಲ್ಡೋಜರ್, ಎನ್‌ಕೌಂಟರ್, ಆಸ್ತಿ ಮುಟ್ಟುಗೋಲು ಎಂಬಿತ್ಯಾದಿ ಹೇಳಿಕೆಗಳನ್ನು ನೀಡುವ ಜವಾಬ್ಧಾರಿಯುತ ಸ್ಥಾನದಲ್ಲಿರುವ ಸಚಿವರು, ಶಾಸಕರು ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಿ. ಅದು ಬಿಟ್ಟು ಕೇವಲ ಹೇಳಿಕೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವುದು ಯಾಕೆ. ಈ ಕುರಿತಾದ ಕಾಯ್ದೆ ಜಾರಿಗೊಳಿಸಲಿ. ಈ ಜಿಲ್ಲೆಯ ಅಭಿವೃದ್ಧಿ, ಸುರಕ್ಷತೆ ದೃಷ್ಟಿಯಿಂದ ಆ ಕಾಯಿದೆಯ ಅಗತ್ಯವಿದೆ ಎಂದರು.
ಕಣ್ಣೊರೆಸುವ ತಂತ್ರ
ರಾಜ್ಯದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ತಮ್ಮ ತಾರತಮ್ಯ ಧೋರಣೆಯಿಂದ ರಾಜಕೀಯ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ದುಷ್ಕರ್ಮಿಗಳಿಂದ ಮೃತಪಟ್ಟ ಮೂವರಿಗೆ ಪರಿಹಾರ ನೀಡುವ ಬದಲು ಒಬ್ಬರಿಗೆ ಮಾತ್ರ ಪರಿಹಾರ ನೀಡಿದ್ದಾರೆ.
ಕೋಮು ಸಂಘರ್ಷದಲ್ಲಿ ಮೂವರು ಮೃತಪಟ್ಟಿದ್ದು, ಒಂದೇ ಪ್ರಕರಣವನ್ನು ಎನ್‌ಐಎಗೆ ನೀಡಿರುವ ಉದ್ದೇಶವೇನು? ಎಲ್ಲ ತಾಯಂದಿರ ನೋವು ಒಂದೇ ಇರುವಾಗ ರಾಜಕೀಯ ಉದ್ದೇಶವಿಟ್ಟು ಒಂದು ಪ್ರಕರಣ ಎನ್‌ಐಎ ನೀಡಿರುವುದು ಸರಿಯಲ್ಲ. ರಾಜ್ಯ ಸರಕಾರಕ್ಕೆ ನಿಜವಾದ ಬದ್ಧತೆಯಿದ್ದರೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಿ ತನಿಖೆ ಮೂಲಕ ಮೂರರಿಂದ ಆರು ತಿಂಗಳೊಳಗೆ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲಿ ಎಂದು ಆಗ್ರಹಿಸಿದರು.
ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚಲು ಮುಕ್ತವಾದ ಅವಕಾಶ ನೀಡಬೇಕು. ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಬೆಳ್ಳಾರೆಯ ಪ್ರವೀಣ್ ಅಂತ್ಯ ಸಂಸ್ಕಾರಕ್ಕೆ ಜನಪ್ರತಿನಿಧಿಗಳು ಹೋಗಿದ್ದಾಗ ಅಲ್ಲಿ ಗುಂಪು ಸೇರಿ, ಸಂಸದರು, ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ, ಹಲ್ಲೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿದ್ದ ಪೊಲೀಸರು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಅಲ್ಲಿಯ ಎಸ್‌ಐಯನ್ನು ವರ್ಗಾವಣೆ ಮಾಡಿ ಸರಕಾರ ಏನು ಸಂದೇಶ ನೀಡುತ್ತಿದೆ. ಈ ರೀತಿ ಪೊಲೀಸರ ಸ್ಥೈರ್ಯವನ್ನು ಕುಗ್ಗಿಸಿದರೆ, ತನಿಖಾ ವ್ಯವಸ್ಥೆಯಲ್ಲಿ ಅವರು ಯಾವ ರೀತಿಯಲ್ಲಿ ಕ್ರಮ ವಹಿಸಲು ಸಾಧ್ಯ. ಪೊಲೀಸರಿಂದ ಅನ್ಯಾಯ ಆದಾಗ ವಿಪಕ್ಷದವರು ನ್ಯಾಯ ಕೇಳುವುದು ಸಹಜ. ಆದರೆ, ಆಡಳಿತ ಪಕ್ಷದವರೇ ಆಡಳಿತದ ವಿರುದ್ಧ ಧರಣಿ, ಪ್ರತಿಭಟನೆ ನಡೆಸುವುದೆಂದರೆ ಏನು ಎಂದು ಪ್ರಶಿಸಿದರು.
ಪ್ರಶಾಂತ್ ಹತ್ಯೆ ಪ್ರಕರಣವೇ ಬೇರೆ. ಆ ಸಂದರ್ಭದಲ್ಲಿ ನಾನು ಆರೋಗ್ಯ ಸಚಿವನಾಗಿದ್ದೆ. ಸ್ಥಳೀಯ ಶಾಸಕರು, ಸಂಬಂಧಪಟ್ಟವರು ಭೇಟಿ ನೀಡಿ ಅಂದು ತಮ್ಮ ಕರ್ತವ್ಯ ನಿರ್ವಹಿಸಿದ್ದರು. ಜನಪ್ರತಿನಿಧಿಯಾಗಿ ಅಂದು ಯಾರೂ ತಾರತಮ್ಯ ಮಾಡಿರಲಿಲ್ಲ. ಆದರೆ ಇಲ್ಲಿ ಹತ್ಯೆಯಾದ ಕುಟುಂಬವೊಂದನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಪರಿಹಾರ ನೀಡಿದ್ದಾರೆ. ಅದಕ್ಕಿಂತ ಕೆಲ ದಿನಗಳ ಹಿಂದೆ ಹತ್ಯೆಗೀಡಾಗಿದ್ದ ಕುಟುಂಬವನ್ನು ಭೇಟಿಯಾಗಿಲ್ಲ. ಮುಖ್ಯಮಂತ್ರಿಯಾಗಿ ಈ ತಾರತಮ್ಯ ಯಾಕೆ ಎಂಬುದನ್ನು ಉತ್ತರಿಸಲಿ ಎಂದು ಪ್ರಶ್ನೆಯೊಂದಕ್ಕೆ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಕುಂಜತ್ತಬೈಲ್, ಟಿ.ಕೆ.ಸುಧೀರ್, ಸಲೀಂ ಪಾಂಡೇಶ್ವರ, ಫಯಾಝ್ ಅಮ್ಮೆಮ್ಮಾರ್, ಇಸ್ಮಾಯಿಲ್, ಯಶವಂತ ಪ್ರಭು, ಶರೀಫ್, ನಾಸಿರ್ ಮೊದಲಾದವರು ಉಪಸ್ಥಿತರಿದ್ದರು.