ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಸಿ.ಟಿ.ರವಿ

ಸಿ.ಟಿ.ರವಿ
ಬೆಂಗಳೂರು, ಆ. 1: ‘ಬಿಜೆಪಿ, ಯಾವುದೇ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ. ನಮ್ಮದು ಕೇಡರ್ ಆಧರಿತ ಸಂಸ್ಥೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಹಲವು ಕಾರಣಕ್ಕೆ ಸ್ವಾಭಾವಿಕವಾಗಿ ಅಸಮಾಧಾನ ಇರುತ್ತದೆ. ಕೆಲವರನ್ನು ವ್ಯಕ್ತಿಗತವಾಗಿ, ಇನ್ನೂ ಹಲವರನ್ನು ಗುಂಪಾಗಿ ಕೂತು ಮಾತನಾಡಿಸುವ ಕೆಲಸ ಇರುತ್ತದೆ. ದವಡೆಯೂ ನಮ್ಮದೇ, ನಾಲಿಗೆಯೂ ನಮ್ಮದೇ. ಹಲ್ಲು ನಾಲಿಗೆಗೆ ಕಚ್ಚಿದರೆ ಹಲ್ಲು ಉದುರಿಸಿಕೊಳ್ಳುವ ಕೆಲಸ ಯಾರೂ ಮಾಡುವುದಿಲ್ಲ' ಎಂದು ಪ್ರತಿಕ್ರಿಯೆ ನೀಡಿದರು.
‘ರಾಷ್ಟ್ರವಾದಕ್ಕೆ ಪಕ್ಷ ಆದ್ಯತೆ ಕೊಡುತ್ತದೆ. ವಿಕಾಸವಾದವೇ ನಮ್ಮ ಪ್ರಥಮ ಆದ್ಯತೆ. ರಾಷ್ಟ್ರಹಿತ ಮತ್ತು ಅಭಿವೃದ್ಧಿಯನ್ನು ಬಿಟ್ಟುಕೊಟ್ಟು ನಾವು ಯಾವತ್ತೂ ಕಾರ್ಯ ಮಾಡಿಲ್ಲ. ನಡೆಯುವವನು ಎಡವುತ್ತಾನೆ ಎಂಬ ಗಾದೆ ಮಾತಿದೆ. ನಮ್ಮ ಕಾರ್ಯದ ವೇಗದಲ್ಲಿ ನಾವು ಕೆಲವನ್ನು ಗಮನಿಸಲು ಸಾಧ್ಯವಾಗದೆ ಇರಬಹುದು. ಅಥವಾ ಅವರ ಅಭಿಪ್ರಾಯಕ್ಕೆ ತಕ್ಕಂತೆ ನಾವು ಕೆಲಸ ಮಾಡಲು ಸಾಧ್ಯ ಆಗದೆ ಇರಬಹುದು. ನಾವು ಕಾರ್ಯಕರ್ತರ ಜೊತೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ' ಎಂದು ಹೇಳಿದರು.
‘ಸೂಲಿಬೆಲೆ ಅವರು ಒಬ್ಬ ಅಪ್ಪಟ ರಾಷ್ಟ್ರವಾದಿ. ಅವರು ವ್ಯತಿರಿಕ್ತವಾಗಿ ಮಾತನಾಡಿದ್ದರೆ ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇವೆ. ಹತ್ತಾರು ಕಾರಣಕ್ಕೆ ಸಿಟ್ಟು ಬಂದಿರಬಹುದು. ಆ ಸಿಟ್ಟನ್ನು ಶಮನ, ಸಮಾಧಾನ ಮಾಡುವುದು ನಮ್ಮ ಕರ್ತವ್ಯ. ಅಧಿಕಾರ ಬೇಕೆಂದಾಗ ಅತಿವೃಷ್ಟಿಯಲ್ಲಿ ಬರುವ ಕಸಕಡ್ಡಿಯನ್ನು ಸಹಿಸಿಕೊಳ್ಳಬೇಕು. ಡ್ಯಾಂ ತುಂಬಿದಾಗ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯ. ಆಗ ಪವರ್ ಟರ್ಬೈನ್ ತಿರುಗುತ್ತದೆ. ಅತಿವೃಷ್ಟಿ ಆದಾಗ ವೇಗವಾಗಿ ಅಣೆಕಟ್ಟು ತುಂಬುತ್ತದೆ. ಅದನ್ನು ನೀರಾವರಿ, ವಿದ್ಯುತ್ ಉತ್ಪಾದನೆ ಮಾಡಲು ಬಳಸಬಹುದು. ತೇಲಿಬಂದ ಕಸಕಡ್ಡಿ ಡ್ಯಾಂನಲ್ಲಿ ಫಿಲ್ಟರ್ ಆಗುತ್ತದೆ. ಫಿಲ್ಟರ್ ಮಾಡುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.







