ಯಕ್ಷಗಾನ ಕಲಾರಂಗದ 33ನೇ ಮನೆ ವಿದ್ಯಾರ್ಥಿನಿಗೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ರಶ್ಮಿತಾಗೆ ಬೈಂದೂರು ತಾಲೂಕಿನ ಜನ್ಸಾಲೆಯಲ್ಲಿ ಬೆಂಗಳೂರಿನ ದಾನಿ ಡಾ.ರಾಜಾ ಜಯಕುಮಾರ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ಮನೆಯ ಪ್ರವೇಶೋತ್ಸವ ಸೋಮವಾರ ಜರಗಿತು.
ಡಾ.ರಾಜಾ ಜಯಕುಮಾರ್ ಮತ್ತು ರಜನಿ ಭಾರತೀ ಮಂಗಲಂ ದಂಪತಿಗಳು ಜ್ಯೋತಿ ಬೆಳಗಿಸಿ ಮನೆಯನ್ನು ಉದ್ಘಾಟಿಸಿದರು. ಅಭ್ಯಾಗತರಾಗಿ ಭಾಗವಹಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಚ್.ಎಸ್. ಶೆಟ್ಟಿ ಯಕ್ಷಗಾನ ಕಲಾರಂಗ ಸೇವೆಯನ್ನು ಶ್ಲಾಘಿಸಿದರು. ಇದೇ ವೇಳೆ ಡಾ. ಜಯಕುಮಾರ್ ವೈದ್ಯಕೀಯ ವಿದ್ಯಾಭ್ಯಾಸ ಮಾಡಲಿಚ್ಛಿಸಿದ ರಶ್ಮಿತಾಳ ಕಲಿಕೆಗೆ ಪ್ರಾಯೋಜಕತ್ವ ವಹಿಸುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಉಪಾಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ, ಯು.ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಮುಖ್ಯ ಶಿಕ್ಷಕ ಉದಯ ಗಾಂವ್ಕರ್, ಹಿರಿಯ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ಉಪಸ್ಥಿತರಿದ್ದರು.
ಇದು ಸಂಸ್ಥೆ ನಿರ್ಮಿಸಿದ 33ನೇ ಮನೆಯಾಗಿದ್ದು, ಇನ್ನೂ ನಾಲ್ಕು ಮನೆಗಳ ಹಸ್ತಾಂತರ ಸದ್ಯದಲ್ಲೇ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತ ಮಾತುಗಳಲ್ಲಿ ತಿಳಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಪ್ರಾರ್ಥಿಸಿದರು. ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.







