ಆ.2ರಂದು ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ: ಕಾಂಗ್ರೆಸ್ ಸಭೆ, ಸಿದ್ದರಾಮೋತ್ಸವದಲ್ಲಿ ಭಾಗಿ

photo credit - pti
ಬೆಂಗಳೂರು, ಆ.1: ದಾವಣಗೆರೆಯಲ್ಲಿ ಆ.3ರಂದು ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಆ.2ರಂದೇ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಮಂಗಳವಾರ ಪಕ್ಷದ ಪ್ರಮುಖರ ಸಭೆ ನಡೆಸಿ, ಆ.3ರಂದು ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ಡಾ.ಶಿವಮೂರ್ತಿ ಮುರುಘಾಶರಣರು ಹಾಗೂ ಇತರೆ ಸ್ವಾಮೀಜಿಗಳೊಂದಿಗೆ ರಾಹುಲ್ ಅವರು ಚರ್ಚಿಸಲಿದ್ದಾರೆ.
ಮುಂದಿನ ಸಿಎಂ ಪ್ರತಿಪಾದನೆಗೆ ನಾಯಕರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಆಸಕ್ತಿ ವಹಿಸಿ ಈ ಸಭೆ ಆಯೋಜಿಸಿದ್ದಾರೆ. ಪಕ್ಷ ಗೆಲ್ಲುವ ಅವಕಾಶಗಳ ವಿಸ್ತರಣೆ ಪ್ರಯತ್ನ ವ್ಯಕ್ತಿಗತ ಪ್ರತಿಷ್ಠೆಗಳಿಂದಾಗಿ ನಿಂತು ಹೋಗಿದೆ ಎಂಬ ಕಾರಣಕ್ಕೆ ಮತ್ತೊಮ್ಮೆ ರಾಹುಲ್ ಅವರಿಂದ ಮಾರ್ಗದರ್ಶನ ಕೊಡಿಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಆ.2ರ ರಾತ್ರಿ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹೀಗೇ ನಾನಾ ಸಮಾವೇಶಗಳನ್ನು ರಾಜ್ಯದ ನಾನಾ ಭಾಗಗಳಲ್ಲಿ ಆರಂಭಿಸುವ ಕುರಿತಂತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.





