ಒಡೆಸಾ ಬಂದರಿನಿಂದ ಉಕ್ರೇನ್ ನ ಧಾನ್ಯದ ಸಾಗಣೆಗೆ ಚಾಲನೆ
ಕೀವ್, ಆ.1: ಉಕ್ರೇನ್ನ ಒಡೆಸಾ ಬಂದರಿನಿಂದ ಜೋಳ ತುಂಬಿಸಿಕೊಂಡ ಸಿಯೆರಾ ಲಿಯೋನ್ ದೇಶದ ಧ್ವಜ ಹೊಂದಿರುವ ರಝೋನಿ ಎಂಬ ಹಡಗು ಲೆಬನಾನ್ನತ್ತ ತೆರಳಲು ಸಜ್ಜುಗೊಂಡಿದೆ ಎಂದು ಟರ್ಕಿಯ ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ. ರಶ್ಯ ಯುದ್ಧ ಆರಂಭವಾದ ಬಳಿಕ ಉಕ್ರೇನ್ನ ಬಂದರುಗಳಿಂದ ಆಹಾರ ಧಾನ್ಯ ಹೊರದೇಶಕ್ಕೆ ರಫ್ತಾಗಲು ತಡೆಯಾಗಿತ್ತು.
ಇದರಿಂದ ಜಾಗತಿಕ ಆಹಾರ ಬಿಕ್ಕಟ್ಟು ನೆಲೆಸುವ ಅಪಾಯವನ್ನು ಅರಿತ ವಿಶ್ವಸಂಸ್ಥೆಯು ಟರ್ಕಿಯ ಮಧ್ಯಸ್ಥಿಕೆಯಲ್ಲಿ ರಶ್ಯ ಮತ್ತು ಉಕ್ರೇನ್ನ ಮಧ್ಯೆ ಮಾತುಕತೆಗೆ ವೇದಿಕೆ ಸಜ್ಜುಗೊಳಿಸಿತ್ತು. ಅದರಂತೆ ಜುಲೈ 22ರಂದು ಉಕ್ರೇನ್ ಬಂದರಿನಿಂದ ಆಹಾರ ಧಾನ್ಯಗಳ ರಫ್ತಿನ ಕುರಿತ ಒಪ್ಪಂದಕ್ಕೆ ಸಹಿ ಬಿದ್ದಿದೆ. 610 ಅಡಿ ಉದ್ದ, 26 ಮೀಟರ್ ಅಗಲವಿರುವ ರಝೋನಿ ಹಡಗು 30,000 ಟನ್ಗಳಷ್ಟು ಸರಕು ಹೊರುವ ಸಾಮರ್ಥ್ಯ ಹೊಂದಿದೆ ಎಂದು ಮರೈನ್ ಟ್ರಾಫಿಕ್ ವೆಬ್ಸೈಟ್ ಹೇಳಿದೆ.
ರಶ್ಯದೊಂದಿಗಿನ ಒಪ್ಪಂದದ ಅನುಸಾರ ಶೀಘ್ರವೇ ಇನ್ನಷ್ಟು ಆಹಾರ ಧಾನ್ಯ ಸಾಗಣೆ ಕಾರ್ಯ ನಡೆಯಲಿದೆ ಎಂದು ವರದಿಯಾಗಿದೆ. ಉಕ್ರೇನ್ ಬಂದರಿನಿಂದ ಧಾನ್ಯ ಸಾಗಣೆಯ ಉಪಕ್ರಮಗಳ ಜಂಟಿ ಸಮನ್ವಯ ಕೇಂದ್ರವನ್ನು ಕಳೆದ ಬುಧವಾರ ಟರ್ಕಿ ರಾಜಧಾನಿ ಇಸ್ತಾನ್ಬುಲ್ನಲ್ಲಿ ಪ್ರಾರಂಭಿಸಲಾಗಿದ್ದು ಈ ಕೇಂದ್ರದಲ್ಲಿ ರಶ್ಯ ಮತ್ತು ಉಕ್ರೇನ್ನ ಸಿಬಂದಿಗಳು, ಟರ್ಕಿ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳಿದ್ದಾರೆ.
ಉಕ್ರೇನ್ ಬಂದರಿನಿಂದ ಪೂರ್ವ ನಿರ್ಧರಿತ ಮಾರ್ಗದಲ್ಲಿ ಆಹಾರ ಧಾನ್ಯ ಸಾಗಣೆ ಮತ್ತು ಉಕ್ರೇನ್ ಬಂದರಿಗೆ ಆಗಮಿಸುವ ಹಡಗುಗಳಲ್ಲಿ ಶಸ್ತ್ರಾಸ್ತ್ರಗಳನ್ನು ತರುತ್ತಿಲ್ಲ ಎಂಬುದನ್ನು ದೃಢಪಡಿಸುವುದು ಈ ಸಮನ್ವಯ ಕೇಂದ್ರದ ಕಾರ್ಯವಾಗಿರುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಎರಡೂ ದೇಶಗಳ ಆಹಾರ ಧಾನ್ಯಗಳ ರಫ್ತು ಸ್ಥಗಿತಗೊಂಡಿರುವುದು ಜಾಗತಿಕವಾಗಿ ಆಹಾರ ಧಾನ್ಯದ ತೀವ್ರ ಕೊರತೆ ಮತ್ತು ದರದಲ್ಲಿ ಹೆಚ್ಚಳಕ್ಕೆ ಕಾರಣವಾಗಿತ್ತು.
ಯುದ್ಧದ ನೇರ ಪರಿಣಾಮವಾಗಿ ವಿಶ್ವದಾದ್ಯಂತ ಸುಮಾರು 50 ಮಿಲಿಯನ್ ಜನತೆಗೆ ಆಹಾರಧಾನ್ಯದ ತೀವ್ರ ಕೊರತೆ ಕಾಡಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಈ ಮಧ್ಯೆ, ಉಕ್ರೇನ್ ಬಂದರಿನಿಂದ ಆಹಾರ ಧಾನ್ಯಗಳ ಒಪ್ಪಂದಕ್ಕೆ ಸಹಿ ಬಿದ್ದ ಕೆಲವೇ ಗಂಟೆಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ದರದಲ್ಲಿ ಭಾರೀ ಕುಸಿತವಾಗಿದೆ ಎಂದು ವರದಿಯಾಗಿದೆ.