ಮೂರು ಕೊಲೆಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆಗೆ ಜಾತ್ಯತೀತ ಪಕ್ಷ- ಸಂಘಟನೆಗಳ ಆಗ್ರಹ

ಮಂಗಳೂರು: ದ್ವೇಷದ ಸರಣಿ ಕೊಲೆಗಳಿಗೆ ಬಿಜೆಪಿ ಸರಕಾರದ ಕೋಮುವಾದಿ ನೀತಿಗಳೇ ಕಾರಣವಾಗಿದ್ದು, ಸಮಾನ ಪರಿಹಾರದ ಜತೆಗೆ ಮೂರು ಕೊಲೆಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳು ಒತ್ತಾಯಿಸಿವೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಈ ಒತ್ತಾಯ ಮಾಡಿರುವ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತವಾಗಿ ಬಿಜೆಪಿ ಜನಪ್ರತಿನಿಧಿಗಳು ಮತೀಯ ದ್ವೇಷದ ಕೊಲೆಗಳಿಗೆ ಸಂಬಂಧಿಸಿ ತನಿಖೆ, ಸಾಂತ್ವನ ಹಾಗೂ ಪರಿಹಾರ ವಿತರಣೆ ಸಂದರ್ಭ ಧರ್ಮಾತೀತ ತಾರತಮ್ಯ ಎಸಗಿರುವುದು ಖಂಡನಾರ್ಹ. ಕೊಲೆಯಾದ ಮೂರು ಯುವಕರ ಕುಟುಂಬಗಳಿಗೆ ಸಮಾನ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸಿಪಿಎಂ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ, ಒಂದು ಸಮುದಾಯವನ್ನು ಮೆಚ್ಚಿಸುವ ರೀತಿಯಲ್ಲಿ ರಾಜ್ಯ ಸರಕಾರ ನಡೆದುಕೊಂಡಿರುವುದು ಖಂಡನೀಯ ಎಂದರು.
ಚುನಾವಣೆ ಹತ್ತಿರವಾಗುವಂತೆ ಜಿಲ್ಲೆಯಲ್ಲಿ ಇಂತಹ ಕೋಮು ದ್ವೇಷದ ಪ್ರಕರಣಗಳು ನಡೆಯುವುದು ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರಕರಣದ ಸೂತ್ರಧಾರಿಯೂ ಒಬ್ಬರೇ ಆಗಿರಬಹುದೆಂಬ ಅನುಮಾನವೂ ಕಾಡುವಂತಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಿಪಿಐ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿ, ಸುಳ್ಯದಲ್ಲಿ ಮಸೂದ್ ಎಂಬಾತನ ಕೊಲೆ ಆಕಸ್ಮಿಕ ಎಂಬುದಾಗಿ ಕಂಡು ಬಂದರೂ ಅದೊಂದು ಯೋಜಿತ ಕೊಲೆಯಂತೆ ಕಾಣುತ್ತಿದೆ. ರಾಜ್ಯ ಸರಕಾರ ಬೇಜವಾಬ್ಧಾರಿಯಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಮತ್ತೆರಡು ಕೊಲೆಗಳು ನಡೆದಿದೆ ಎಂದು ಆರೋಪಿಸಿದರು.
ವಕೀಲ ದಿನೇಶ್ ಹೆಗ್ಡೆ ಉಳ್ಳೇಪಾಡಿ ಮಾತನಾಡಿ, ಮುಖ್ಯಮಂತ್ರಿ ರಾಜಧರ್ಮ ಪಾಲನೆ ಮಾಡುವಾಗ ನಿಷ್ಪಕ್ಷಪಾತವಾಗಿ ನಡೆದುಕೊಲ್ಳಬೇಕು. ಸಂವಿಧಾನ ಬದ್ಧವಾಗಿ, ಧರ್ಮಾತೀತವಾಗಿ ಅವರ ನಡೆ ಇದಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಜಿಲ್ಲಾಧಿಕಾರಿಯೂ ತಮ್ಮ ಕರ್ತವ್ಯದಲ್ಲಿ ಸೋತಿದ್ದು, ಅಧಿಕಾರಿಗಳು ಸರಕಾರದ ಬಾಲಂಗೋಚಿಯಾಗಿ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಮುಖ್ಯಮಂತ್ರಿಯಿಂದ ಇದೀಗ ಕೊಲೆಯಾದ ಇನ್ನಿಬ್ಬರು ಯುವಕರ ಮನೆಗೂ ಭೇಟಿ ನೀಡುವ ಹೇಳಿಕೆ ತಪ್ಪೊಪ್ಪಿಗೆಯನ್ನು ಧ್ವನಿಸುತ್ತದೆ. ಹಾಗಿದ್ದರೂ ಅವರು ತಪ್ಪನ್ನು ಒಪ್ಪಿಕೊಂಡು ಭೇಟಿಗೆ ಮುಂದಾಗಿರುವ ಸ್ವಾಗತಾರ್ಹ ಎಂದರು.
ನೆರೆಯ ರಾಜ್ಯವಾದ ಕೇರಳವನ್ನು ವಿಲನ್ ರೀತಿಯಲ್ಲಿ ರಾಜ್ಯ ಸರಕಾರ ಬಿಂಬಿಸುತ್ತಿದೆ. ಅಕ್ರಮವಾಗಿ ಕೇರಳಕ್ಕೆ ಸಾಗಾಟವಾಗುವ ಮರಳನ್ನು ನಿಯಂತ್ರಿಸಲಾಗುತ್ತಿಲ್ಲ. ಇಲ್ಲಿಯ ಜೂಜು ಅಡ್ಡೆಗಳು, ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟಲಾಗುತ್ತಿಲ್ಲ ಆದರೆ ನಿರ್ಬಂಧದ ಹೆಸರಿನಲ್ಲಿ ಸಂಜೆಯಿಂದ ವ್ಯಾಪಾರ ವಹಿವಾಟಿಗೆ ತೊಂದರೆ ಮಾಡಲಾಗುತ್ತಿದೆ. ಈಗಾಗಲೇ ಹಣಕಾಸಿನ ಬಿಕ್ಕಟ್ಟಿನಲ್ಲಿರುವಾಗ ಇಂತಹ ಕ್ರಮಗಳಿಂದ ಆಗುವ ಆರ್ಥಿಕ ನಷ್ಟವನ್ನು ತುಂಬಿಸುವವರು ಯಾರು ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದರು.
ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ವಿ. ರಾವ್, ಇಂಟಕ್ ಜಿಲ್ಲಾ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮೊದಲಾದವರು ಮಾತನಾಡಿ ಜಿಲ್ಲೆಯಲ್ಲಿ ನಡೆದ ಕೊಲೆಗಳ ತನಿಖೆಯನ್ನು ವಿಶೇಷ ತನಿಖಾ ತಂಡ ಮೂಲಕ ನಡೆಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ಎಐವೈಎಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಸಿಐಟಿಯು ದ.ಕ. ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
"ಮುಖ್ಯಮಂತ್ರಿ ತಮ್ಮಿಂದ ಆದ ತಪ್ಪಿಗೆ ಕ್ಷಮೆಯಾಚಿಸಬೇಕು. ಇದೀಗ ಮುಖ್ಯಮಂತ್ರಿ ಯಾವಾಗ ಮತ್ತೆ ಜಿಲ್ಲೆಗೆ ಬರುತ್ತಾರೋ ಗೊತ್ತಿಲ್ಲ. ಅವರು ಬರುವುದೆಂದರೆ ಸುಲಭವೂ ಅಲ್ಲ. ಅವರ ಕೆಲಸದ ಒತ್ತಡದ ನಡುವೆ ಸಮಯ ಮಾಡಿಕೊಂಡು ಬರುವ ಜತೆಗೆ ಲಕ್ಷಾಂತರ ರೂ. ಖರ್ಚಾಗುತ್ತದೆ. ಆದರೆ ಅವರಿಗೆ ಪಾಪಪ್ರಜ್ಞೆ ಇದ್ದು ತಪ್ಪಿನ ಅರಿವಾಗಿದ್ದರೆ ಅವರ ಪಕ್ಷದ ಶಾಸಕರನ್ನು ತಕ್ಷಣಕ್ಕೆ ಬಲಿಪಶುಗಳ ಮನೆಗೆ ಕಳುಹಿಸಿ, ಸರಕಾರದ ಪರಿಹಾರ ನೀಡಲಿ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅದು ಪ್ರಧಾನವಾದ ಅಂಶ. ಎನ್‌ಐಎ ತನಿಖೆ ನಡೆಸುವುದು ಕೊಲೆಗಳಲ್ಲಿ ಅಂತಾರಾಷ್ಟ್ರೀಯ ಕೈವಾಡ ಇದೆ ಎಂದಾದಾಗ. ಇದೀಗ ಒಂದು ಪ್ರಕರಣವನ್ನು ಮಾತ್ರ ಎನ್‌ಐಎಗೆ ಒಪ್ಪಿಸಲಾಗಿದೆ. ರಾಜ್ಯ ಸರಕಾರಕ್ಕೆ ಅವರ ಪೊಲೀಸರ ತನಿಖೆ ಮೇಲೆ ನಂಬಿಕೆ ಇಲ್ಲದೆ ಕೇಂದ್ರ ಸರಕಾರದ ಅಧೀನದ ತನಿಖೆಗೆ ವಹಿಸುತ್ತದೆ ಎಂದರೆ ಏನರ್ಥ? ಕ್ರಿಮಿನಲ್‌ಗಳನ್ನು ನಿಯಂತ್ರಣ ಮಾಡಲಾಗದೆ, ಜನರನ್ನು ಮನೆಯೊಳಗೆ ಕೂರಿಸಿ ವ್ಯಾಪಾರ, ಓಡಾಟಕ್ಕೆ ನಿರ್ಬಂಧ ವಿಧಿಸಿದರೆ ಏನು ಪ್ರಯೋಜನ?"
*ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ.