ಡಿಕೆಶಿ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಆ.1: ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್, ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.
ಸಿಬಿಐ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಡಿಕೆಶಿ ಪರ ವಾದಿಸಿದ ವಕೀಲರು, ಎಫ್‍ಐಆರ್‍ನಲ್ಲಿ ಆರೋಪದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಜೊತೆಗೆ ಆದಾಯ ತೆರಿಗೆ ಇಲಾಖೆ ಇಡೀ ಕುಟುಂಬದ ಆದಾಯ ಗಣನೆಗೆ ತೆಗೆದುಕೊಂಡಿದೆ. ನಿಯಮದ ಅನುಸಾರ ಡಿ.ಕೆ.ಶಿವಕುಮಾರ್ ಅವರ ಆದಾಯವನ್ನು ಮಾತ್ರ ಪರಿಗಣಿಸಬೇಕಿತ್ತು. ಆದರೆ ಹಾಗೆ ಮಾಡದೆ ನಿಯಮ ಉಲ್ಲಂಘಿಸಿರುವುದರಿಂದ ಪ್ರಕರಣ ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಬೆಂಗಳೂರು ಮತ್ತು ನವದೆಹಲಿಯ ವಿವಿಧೆಡೆ ನಡೆಸಲಾಗಿದ್ದ ಐ.ಟಿ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಡಿಕೆಶಿ ಮತ್ತು ಇತರ ನಾಲ್ವರು ಆರೋಪಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದೇ ಪ್ರಕರಣದ ಬಗ್ಗೆ ಸಿಬಿಐ ಕೂಡ ತನಿಖೆ ನಡೆಸುತ್ತಿದೆ.
ಪ್ರಕರಣವೇನು: 2017ರ ಆ.2ರಂದು ಐ.ಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್‍ಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ಮನೆಗಳ ಮೇಲೆ ದಾಳಿ ಮಾಡಿ 8,59,69,100 ರೂ. ಮೊತ್ತವನ್ನು ಜಪ್ತಿ ಮಾಡಿದ್ದರು.
ಡಿಕೆಶಿ, ಸಚಿನ್ ನಾರಾಯಣ, ಸುನಿಲ್ ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯ್ದೆ-1961ರ ಕಲಂ 277 ಮತ್ತು 278 ಹಾಗೂ ಐಪಿಸಿ ಕಲಂ 120 ಬಿ, 193 ಹಾಗೂ 199ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಸಿಬಿಐ ಕೂಡ ಪ್ರತ್ಯೇಕ ತನಿಖೆ ನಡೆಸುತ್ತಿದೆ.
ನಮ್ಮನ್ನು ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿ ಆರೋಪಿಗಳಾದ ಡಿ.ಕೆ.ಶಿವಕುಮಾರ್, ಎನ್.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಸಲ್ಲಿಸಿರುವ ಅರ್ಜಿಗಳನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಕೋರ್ಟ್ ವಿಚಾರಣೆ ನಡೆಸಿತ್ತು.
ಆಗ ಐ.ಟಿ ಪರ ವಕೀಲರು ವಾದ ಮಂಡಿಸಿ 'ಆರೋಪಿಗಳು, 2017-18ರ ಸಾಲಿನ ಆದಾಯ ತೆರಿಗೆ ತಪ್ಪಿಸುವಲ್ಲಿ ಸಂಚು ರೂಪಿಸಿದ್ದಾರೆ. ಬೇರೊಂದು ಪ್ರಕರಣದಲ್ಲಿ ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ಇವರೆಲ್ಲಾ ಆದಾಯ ತೆರಿಗೆ ಕಾಯ್ದೆ-1961ರ ವಿವಿಧ ಕಲಂಗಳಡಿ ದಂಡನೀಯ ಅಪರಾಧ ಎಸಗಿದ್ದಾರೆ. ಇಂತಹ ಆಪಾದಿತರನ್ನು ಪ್ರಾಸಿಕ್ಯೂಷನ್‍ಗೆ ಒಳಪಡಿಸುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್‍ನ ವಿವಿಧ ತೀರ್ಪುಗಳು ಈಗಾಗಲೇ ಸ್ಪಷ್ಟಪಡಿಸಿವೆ ಎಂದು ಹೇಳಿದ್ದರು.







