ಭಾಗಮಂಡಲ-ಕರಿಕೆಯಲ್ಲಿ ಮಳೆ: ಬರೆ ಕುಸಿತ

ಮಡಿಕೇರಿ ಆ.1 : ಕೊಡಗಿನ ಗಡಿ ಕರಿಕೆ ವ್ಯಾಪ್ತಿಯಲ್ಲಿ ರವಿವಾರ ರಾತ್ರಿಯ ಅವಧಿಯಲ್ಲಿ ಸುರಿದ ಭಾರೀ ಮಳೆಗೆ, ಭಾಗಮಂಡಲ-ಕರಿಕೆ ನಡುವಿನ ರಸ್ತೆಯ ಹಲವೆಡೆಗಳಲ್ಲಿ ಬರೆ ಕುಸಿತದೊಂದಿಗೆ ಮರಗಳು ಉರುಳಿ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸುಮಾರು ಮೂರು ಇಂಚು ಮಳೆಯಾಗಿದ್ದರೆ, ಕರಿಕೆ ವಿಭಾಗದಲ್ಲಿ ಮತ್ತಷ್ಟು ಹೆಚ್ಚಿನ ಗಾಳಿ ಮಳೆಯಾದ ಪರಿಣಾಮ, ರಸ್ತೆಯ ಹಲವಡೆಗಳಲ್ಲಿ ಬರೆ ಕುಸಿದು, ಭಾರೀ ಪ್ರಮಾಣದ ಮಣ್ಣು ರಸ್ತೆಯ ಮೇಲಕ್ಕೆ ಬಿದ್ದಿದ್ದರೆ, ಹಲವೆಡೆ ಮರಗಳು ರಸ್ತೆಗಡ್ಡ ಉರುಳಿವೆ.
ಭಾಗಮಂಡಲ-ಕರಿಕೆ ರಸ್ತೆ ನೆರೆಯ ಕೇರಳ ರಾಜ್ಯವನ್ನು ಸಂಪರ್ಕಿಸುವ ರಸ್ತೆಯೂ ಆಗಿದ್ದು, ಬರೆಕುಸಿತದಿಂದ ರಸ್ತೆ ಸಂಚಾರ ಸ್ಥಗಿತಗೊಂಡು ಆ ವ್ಯಾಪ್ತಿಯ ಸಾರ್ವಜನಿಕರು, ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸುವಂತಾಯಿತು.
ಲೋಕೋಪಯೋಗಿ ಇಲಾಖೆ ಸಿಬ್ಬಂದಿಗಳು ರಸ್ತೆಯ ಮಣ್ಣನ್ನು ತೆರವು ಗೊಳಿಸುವ ಕಾರ್ಯದಲ್ಲಿ ಬೆಳಗ್ಗಿನಿಂದಲೆ ನಿರತರಾಗಿದ್ದು, ಸಂಜೆಯ ವೇಳೆಗೆ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.







