ವೆಯ್ಟ್ ಲಿಫ್ಟಿಂಗ್‍ನಲ್ಲಿ ಮತ್ತೊಂದು ಪದಕ: ಹರ್ಜಿಂದರ್ ಕೌರ್‌ಗೆ ಕಂಚು
ಕಾಮನ್‍ವೆಲ್ತ್ ಕ್ರೀಡಾಕೂಟ

ಬರ್ಮಿಂಗ್ ಹ್ಯಾಂ: ಕಾಮನ್‍ವೆಲ್ತ್ ಕ್ರೀಡಾಕೂಟದ ನಾಲ್ಕನೇ ದಿನವಾದ ಸೋಮವಾರ ಭಾರತದ ಹರ್ಜಿಂದರ್ ಕೌರ್ ಒಟ್ಟು 212 ಕೆ.ಜಿ. ಭಾರ ಎತ್ತುವ ಮೂಲಕ 71 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಈ ಮೂಲಕ ಕೂಟದಲ್ಲಿ ಭಾರತ 9ನೇ ಪದಕ ಸಂಪಾದಿಸಿತು.
ಇಂಗ್ಲೆಂಡಿನ ಸರಹ್ ಡೇವೀಸ್ ಚಿನ್ನದ ಪದಕ ಗೆದ್ದುಕೊಂಡರು. ಕ್ಲೀನ್ ಆ್ಯಂಡ್ ಜೆರ್ಕ್ ಸುತ್ತಿನಲ್ಲಿ ಎಲ್ಲ ಪ್ರಯತ್ನಗಳಲ್ಲಿ ಹರ್ಜಿಂದರ್ ಸಿಂಗ್ ಯಶಸ್ವಿಯಾದರು. ಮೂರನೇ ಪ್ರಯತ್ನದಲ್ಲಿ 119 ಕೆ.ಜಿ ಎತ್ತುವ ಮೂಲಕ ಅವರು 212 ಕೆಜಿ (93 ಕೆಜಿ + 119 ಕೆಜಿ) ಭಾರ ಎತ್ತಿದಂತಾಯಿತು.
ಸ್ನ್ಯಾಚ್ ವರ್ಗದಲ್ಲಿ ಹರ್ಜಿಂದರ್ ತಮ್ಮ ಮೊದಲ ಪ್ರಯತ್ನದಲ್ಲಿ 90 ಕೆಜಿ ಎತ್ತಲು ವಿಫಲರಾದರು. ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದ ಅವರು ಮೂರನೇ ಪ್ರಯತ್ನದಲ್ಲಿ 93 ಕೆಜಿ ಭಾರ ಎತ್ತಿದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿದೆ.
ಕ್ಲೀನ್ ಆ್ಯಂಡ್ ಜೆರ್ಕ್ ವಿಭಾಗದಲ್ಲಿ 113 ಕೆಜಿಯನ್ನು ಯಶಸ್ವಿಯಾಗಿ ಎತ್ತಿದ ಅವರು ಎರಡನೇ ಪ್ರಯತ್ನದಲ್ಲಿ 116 ಕೆಜಿ ಹಾಗೂ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿ 119 ಕೆಜಿ ಭಾರ ಎತ್ತಿದರು.