ಬೈಂದೂರು ತಾಲೂಕಿನಾದ್ಯಂತ ಭಾರೀ ಮಳೆ: ಹಲವು ಮನೆಗಳು ಜಲಾವೃತ, ಜಿಲ್ಲಾಧಿಕಾರಿ ಭೇಟಿ

ಉಡುಪಿ, ಆ.2: ಸೋಮವಾರ ಮಧ್ಯಾಹ್ನದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇದರಿಂದ ಮನೆ, ವಾಹನಗಳಿಗೆ ಹಾನಿಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.
ಬೈಂದೂರು ತಾಲೂಕಿನ ಶಿರೂರು ಪೇಟೆ, ಅಡವಿನಕೋಣೆ, ಕಳಿಹಿತ್ಲು ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಮನೆಗಳು ಮುಳುಗಡೆಗೊಂಡಿವೆ. ಅದೇ ರೀತಿ ಈ ಪ್ರದೇಶದಲ್ಲಿ ವಾಹನಗಳು ನೀರಿನಲ್ಲಿ ಮುಳುಗಡೆಗೊಂಡಿರುವ ಬಗ್ಗೆಯೂ ವರದಿಯಾಗಿದೆ. ಅಲ್ಲದೆ ದೋಣಿಗಳಿಗೂ ಹಾನಿ ಯಾಗಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಕುಂದಾಪುರ ಎಸಿ ರಾಜು, ಮಾಜಿ ಶಾಸಕ ಗೋಪಾಲ ಪೂಜಾರಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜಿ.ಯು ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಸದಸ್ಯರಾದ ಖಾಪ್ಸಿ ನೂರ್ ಮಹಮ್ಮದ್, ಮುಖ್ರಿ ಅಲ್ತಾಫ್, ಫಾರೂಖ್, ಪಿಡಿಒ ರಾಜೇಂದ್ರ, ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ, ಅರವಿಂದ ಹಾಗು ಇತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಭಾಗದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.