ನಿಟ್ಟೂರು ಪ್ರೌಢ ಶಾಲೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಉದ್ಘಾಟನೆ

ಉಡುಪಿ, ಆ.2: ಉಡುಪಿ ನಿಟ್ಟೂರು ಪ್ರೌಢ ಶಾಲೆಯಲ್ಲಿ ದಾನಿಗಳ ಸಹಕಾರದಿಂದ ನವೀಕರಣಗೊಂಡ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಮತ್ತು ವೇದಿಕೆ ಸೋಮವಾರ ಉದ್ಘಾಟನೆಗೊಂಡಿತು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ದಾನಿ ಹಾಲಾಡಿ ಶ್ರೀನಿವಾಸ ಶೆಟ್ಟಿ (ಎಚ್.ಎಸ್.ಶೆಟ್ಟಿ) ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ಲದೇ ಶಾಲೆಯ ಅಭಿವೃದ್ಧಿಗಾಗಿ ಒಂದು ಕೋಟಿ ರೂ. ಮೊತ್ತದ ಚೆಕ್‌ನ್ನು ಹಸ್ತಾಂತರಿಸಿದರು.
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ದೇಶವನ್ನು ಮುನ್ನಡೆಸಿದ, ಮುನ್ನಡೆಸುವ ಅನೇಕ ನಾಯಕರು ಹುಟ್ಟಿದ್ದು ಗ್ರಾಮೀಣ ಪ್ರದೇಶದಲ್ಲಿ. ಓದಿದ್ದು ತಮ್ಮ ಮಾತೃ ಭಾಷೆಯ ಶಾಲೆಗಳಲ್ಲಿ. ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಲ್ಲಿ ಅದಮ್ಯ, ಆತ್ಮವಿಶ್ವಾಸವನ್ನು ತುಂಬುವ, ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಗಡನ್ನು ಮೈಗೂಡಿಸುವ ಕೇಂದ್ರಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಮಾತನಾಡಿ, ಸರಕಾರಿ ಮತ್ತು ಅನುದಾನಿತ ಶಾಲೆಗಳ ಏಳಿಗೆಗಾಗಿ ಸರಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಎಚ್.ಎಸ್. ಶೆಟ್ಟಿ ಅವರಂಥ ದಾನಿಗಳ ನೆರವು ಶ್ಲಾಘನೀಯ ಎಂದರು.
ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಾಲೆಯ ಇತಿಹಾಸದಲ್ಲಿ ಇದು ಅವಿಸ್ಮರಣೀಯ ದಿನವಾಗಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಎಚ್.ಎಸ್.ಶೆಟ್ಟಿ ಅವರನ್ನು ಬೆಳ್ಳಿಯ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ವಿಜ್ಞಾನಿ ಹಾಗೂ ಉದ್ಯಮಿ ಡಾ. ರಾಜಾ ವಿಜಯಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳ ನೆರನೊಂದಿಗೆ ಗ್ಯಾಸ್ ಸಂಪರ್ಕವಿಲ್ಲದ ೧೨ ವಿದ್ಯಾರ್ಥಿಗಳಿಗೆ ಉಚಿತವಾಗಿ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲಾಯಿತು.
ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್.ವಿ. ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಅನಸೂಯ ವಂದಿಸಿದರು.