ಬಂಟಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಸೃಷ್ಟಿ’ ಅತ್ಯುತ್ತಮ ಯೋಜನ ಪ್ರಶಸ್ತಿ

ಶಿರ್ವ, ಆ.2: ಬಂಟಕಲ್ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಮಹಮ್ಮದ್ ಅತೀಕ್, ಕೆ.ಎನ್.ಶ್ರೀಶ, ರೋಹನ ಯು.ಪಾಲನ್ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಕಾರ್ತಿಕ್ ವಿ.ನೇತೃತ್ವದಲ್ಲಿ ಅಡಿಕೆ ಮರವನ್ನು ಏರುವ ಮತ್ತು ಮಳೆಗಾಲದ ಸಮಯದಲ್ಲಿ ಶಿಲೀಂಧ್ರದಿಂದ ಅಡಿಕೆ ಬೆಳೆಯನ್ನು ರಕ್ಷಿಸಲು ಕೀಟನಾಶಕವನ್ನು ಸಿಂಪಡಿಸುವ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.
ಬೆಳಗಾವಿ ವಿಎಸ್‌ಎಸ್ ಟ್ರಸ್ಟ್ ಮತ್ತು ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾ ನಿಲಯವು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದೊಂದಿಗೆ ಬೆಂಗಳೂರಿನ ಬಿಎಂಎಸ್ ತಾಂತ್ರಿಕ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ರಾಜ್ಯಮಟ್ಟದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ಸೃಷ್ಟಿ ಯಲ್ಲಿ ಈ ಪ್ರಾಜೆಕ್ಟ್‌ಗೆ ಅತ್ಯುತ್ತಮ ಪ್ರಾಜೆಕ್ಟ್ ಸಾಂತ್ವನ ಪ್ರಶಸ್ತಿ ದೊರೆತಿದೆ.
ಈ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಕರ್ನಾಟಕದಾದ್ಯಂತ ೧೦೪ ಕಾಲೇಜಿನ ೧೭೫೦ ವಿದ್ಯಾರ್ಥಿಗಳು ಭಾಗವಹಿಸಿ ದ್ದರು. ಸ್ಪರ್ಧೆಯ ಬಹುಮಾನ ವಿತರಣೆಯು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ವಿಟಿಯು ಬೆಳಗಾವಿಯ ಉಪಕುಲಪತಿ ಡಾ.ಕರಿಸಿದ್ದಪ್ಪನೇತೃತ್ವದಲ್ಲಿ ನಡೆಯಿತು.





